Advertisement

ರಸ್ತೆ ಅಭಿವೃದ್ಧಿ ಅವ್ಯವಹಾರದಲ್ಲಿ ಸಿಎಂ ಕಿಕ್‌ ಬ್ಯಾಕ್‌

12:09 PM Oct 31, 2017 | Team Udayavani |

ಬೆಂಗಳೂರು: “ನಗರದಲ್ಲಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ.ಜಾರ್ಜ್‌ ಸುಮಾರು 400 ಕೋಟಿ ಕಿಕ್‌ ಬ್ಯಾಕ್‌ ಪಡೆದಿದ್ದಾರೆ,’ ಎಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

Advertisement

ನಗರದ ರಸ್ತೆ ಅಭಿವೃದ್ಧಿ ಅವ್ಯವಹಾರಗಳಿಗೆ ಸಂಬಂಧಿಸಿದಂತೆ 3097 ಪುಟಗಳ ದಾಖಲೆಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನ 27 ವಿಧಾನಸಭೆ ಕ್ಷೇತ್ರಗಳಲ್ಲಿನ ರಸ್ತೆ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ 13,608 ಕೋಟಿ ರೂ. ವ್ಯಯಿಸಲಾಗಿದೆ.

ಆದರೆ, ಯಾವುದೇ ಕ್ಷೇತ್ರದಲ್ಲೂ ಗುಣಮಟ್ಟ ಕೆಲಸ ಮಾಡದೆ ಕೋಟ್ಯಂತರ ರೂ. ಅವ್ಯವಹಾರ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಜಾರ್ಜ್‌ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಲಾಗಿದೆ ಎಂದರು.

ಮೂರುವರೆ ವರ್ಷಗಳಲ್ಲಿ ಸರ್ಕಾರ 4878 ಕೋಟಿ ರೂ.ಬಿಡುಗಡೆಗೊಳಿಸಿದೆ. ಇದರೊಂದಿಗೆ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿಗಾಗಿ 4784 ಕೋಟಿ ರೂ. ಸೇರಿ ಒಟ್ಟು 9661 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಹೇಳಿದರು. 

ಇದರೊಂದಿಗೆ ದೀರ್ಘ‌ಕಾಲ ಬಾಳಿಕೆ ಬರುವ ವೈಟ್‌ಟಾಪಿಂಗ್‌ ರಸ್ತೆ ಮಾಡಲು ಸರ್ಕಾರ ಮುಂದಾಗಿದೆ. ಇಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಒಂದು ಕಿ.ಮೀ ರಸ್ತೆ ನಿರ್ಮಿಸಬಹುದು. ಆದರೆ, ಪ್ರಸ್ತುತ ಕಾಮಗಾರಿಗೆ ಹೆಚ್ಚುವರಿಯಾಗಿ 600 ಕೋಟಿ ರೂ. ನಿಗದಿ ಮಾಡಿದ್ದು, ಇದರಲ್ಲೂ 200 ಕೋಟಿ ರೂ. ಕಮಿಷನ್‌ ಪಡೆಯಲಾಗಿದೆ ಎಂದು ದೂರಿದರು.

Advertisement

ರಾಜ್ಯದಲ್ಲಿರುವ 14 ರಾಷ್ಟ್ರೀಯ ಹೆದ್ದಾರಿಗಳು ಮತ್ತು 114 ರಾಜ್ಯ ಹೆದ್ದಾರಿಗಳ ಒಟ್ಟು ಉದ್ದ 28,311 ಕಿ.ಮೀ. ಇದ್ದು, ಇವುಗಳ ಅಭಿವೃದ್ಧಿಗೆ ವೆಚ್ಚವಾಗುವ ಮೊತ್ತ 7500 ಕೋಟಿ ರೂ.ಗಿಂತ ಕಡಿಮೆ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗೆ 9661 ಕೋಟಿ ರೂ. ವೆಚ್ಚವಾಗಿದೆ. ಆದರೂ ಶೇ.80ರಷ್ಟು ರಸ್ತೆಗಳು ಗುಂಡಿಗಳಿಂದ ಕೂಡಿವೆ ಎಂದು ಆರೋಪಿಸಿದರು.

ವೈಟ್‌ ಟಾಪಿಂಗ್‌ ಮಾಡಿದರೆ ಅಂತರ್ಜಲ ಕುಸಿಯುತ್ತೆ!
“ಸರ್ಕಾರ ನಗರದಲ್ಲಿ ನಿರ್ಮಿಸಲು ಮುಂದಾಗಿರುವ ವೈಟ್‌ಟಾಪಿಂಗ್‌ ರಸ್ತೆಗಳಿಂದ ಅಂತರ್ಜಲ ಮಟ್ಟ ಕುಸಿಯಲಿದೆ. ನಗರದಲ್ಲಿ 2011-12ರಲ್ಲಿ 512 ಅಡಿಗಳಲ್ಲಿದ್ದ ಅಂತರ್ಜಲ ಮಟ್ಟ 2017ಕ್ಕೆ 978 ಅಡಿಗಳಿಗೆ ಇಳಿದಿದೆ. ವೈಟ್‌ಟಾಪಿಂಗ್‌ ರಸ್ತೆಗಳಿಂದ ಮಳೆ ನೀರು ಭೂಮಿಯಲ್ಲಿ ಇಂಗಲು ಸಾಧ್ಯವಾಗುವುದಿಲ್ಲ. ಆ ಮೂಲಕ ವೈಟ್‌ಟಾಪಿಂಗ್‌ ರಸ್ತೆಗಳಿರುವ ಕಡೆ ಅಂತರ್ಜಲ ಮಟ್ಟ ಇನ್ನಷ್ಟು ಆಳಕ್ಕೆ ಇಳಿಯಲಿದ್ದು, ಅದನ್ನು ತಡೆಯಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ದೂರು ದಾಖಲಿಸಲಾಗುವುದು ಎಂದು ರಮೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next