Advertisement

ಸಿಎಂ ಅವರೇ ನೇರ ಹೊಣೆ: ಬಿಜೆಪಿ ಆರೋಪ

11:46 AM Sep 23, 2017 | Team Udayavani |

ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿದ್ದ ಎಫ್ಐಆರ್‌ಗೆ ಹೈಕೋರ್ಟ್‌ ತಡೆ ನೀಡಿರುವುದು ಸರ್ಕಾರಕ್ಕೆ ಆದ ಭಾರಿ ಮುಖಭಂಗ. ಈ ಮುಖಭಂಗಕ್ಕೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನರವೇ ಹೊಣೆಗಾರರು ಎಂದು ಆರೋಪಿಸಿರುವ ಬಿಜೆಪಿ, ಇದಕ್ಕಾಗಿ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು, ನ್ಯಾಯಾಲಯ, ರಾಜ್ಯದ ಜನತೆ ಹಾಗೂ ಯಡಿಯೂರಪ್ಪನವರ  ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ. 

Advertisement

ವಿಧಾನಸೌಧದಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೋ. ಮಧುಸೂಧನ್‌ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಜೆ. ಪುಟ್ಟಸ್ವಾಮಿ, ನಡೆಯದ ಅಪರಾಧಕ್ಕೆ ರಾಜಕೀಯ ದ್ವೇಷ ಸಾಧಿಸಲು ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯನ ಮಾತು ಕೇಳಿ, ಯಡಿಯೂರಪ್ಪ ಅವರ ವಿರುದ್ಧ ಎಸಿಬಿ ಮೂಲಕ ಎಫ್ಐಆರ್‌ ದಾಖಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಕೆಂಪು ಮಂಗಳಾರತಿ’ ಮಾಡಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು. 

ಯಡಿಯೂರಪ್ಪನವರನ್ನು ರಾಜಕೀಯವಾಗಿ ಎದುರಿಸಲು ತಾಕತ್ತು ಇಲ್ಲದ ಸಿದ್ದರಾಮಯ್ಯ, ಹೇಗಾದರೂ ಮಾಡಿ ಅವರನ್ನು ಕಟ್ಟಿಹಾಕಬೇಕು ಎಂಬ ಉದ್ದೇಶದಿಂದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಎಸಿಬಿ ದಾಖಲಿಸಿರುವ ಎಫ್ಐಆರ್‌ಗಳೇ ಸಾಕ್ಷಿ. ಆದರೆ, ಯಡಿಯೂರಪ್ಪನವರಿಗೆ ನ್ಯಾಯ ಸಿಕ್ಕಿದೆ. ಎಫ್ಐಆರ್‌ಗಳಿಗೆ ಹೈಕೋರ್ಟ್‌ ತಡೆ ನೀಡಿರುವುದರಿಂದ ಸರ್ಕಾರಕ್ಕೆ ಭಾರಿ ಮುಖಭಂಗ ಆಗಿದೆ. ಇದಕ್ಕೆ ಸಿದ್ದರಾಮಯ್ಯನವರೇ ನೇರ ಹೊಣೆ.

ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳುವ ವಿಧಾನಸೌಧದಲ್ಲಿ ಕುಳಿತು ಸಿದ್ದರಾಮಯ್ಯ ದೆವ್ವದ ಕೆಲಸ ಮಾಡಿದ್ದಾರೆ. ಅವರು ತಾವು ಮಾಡಿರುವ ಈ ಸುಳ್ಳು, ರಾಜಕೀಯ ಪ್ರೇರಿತ, ಕುತ್ಸಿತ ಹಾಗೂ ಹೀನ ಕೃತ್ಯಕ್ಕಾಗಿ ರಾಜೀನಾಮೆ ಕೊಡಬೇಕು. ರಾಜ್ಯದ ಜನರ ಕ್ಷಮೆ ಕೇಳಲಿ, ಅದಾಗದಿದ್ದರೆ ಯಡಿಯೂರಪ್ಪನವರ ಕ್ಷಮೆ ಕೇಳಲಿ, ಅದಕ್ಕೂ ನಾಚಿಕೆಯಾದರೆ, ನ್ಯಾಯಾಲಯದ ಕ್ಷಮೆ ಕೇಳಲಿ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗೋ. ಮಧುಸೂಧನ್‌ ಹೇಳಿದರು. 

“ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತವಲ್ಲ. ಮುಂದೊಂದು ದಿನ ಸಿದ್ದರಾಮಯ್ಯನವರೂ ಮಾಜಿ ಆಗಲಿದ್ದಾರೆ. ಆಗ ಅವರೂ ಇದೇ ಪರಿಸ್ಥಿತಿ ಎದುರಿಸಬೇಕಾದೀತು. ಸರ್ಕಾರದ ಅಡ್ವೋಕೇಟ್‌ ಜನರಲ್‌, ನುರಿತ ವಕೀಲರ ತಂಡ ಇದ್ದಾಗ್ಯೂ ರವಿವರ್ಮಾ ಕುಮಾರ್‌ ಅವರನ್ನು ಈ ಪ್ರಕರಣದಲ್ಲಿ ವಾದ ಮಂಡಿಸಲು ನೇಮಕ ಮಾಡಿಕೊಂಡಿದ್ದು ಯಾಕೆ, ಅವರಿಗೆ ಹಣ ಸಿದ್ದರಾಮಯ್ಯ ತಮ್ಮ ಜೇಬಿನಿಂದ ಕೊಟ್ಟರೋ ಅಥವಾ ಸರ್ಕಾರದ ಖಜಾನೆಯಿಂದಲೋ ಎನ್ನುವುದಕ್ಕೆ ಸರ್ಕಾರ ಉತ್ತರ ನೀಡಬೇಕು”.
-ಬಿ.ಜೆ. ಪುಟ್ಟಸ್ವಾಮಿ, ವಿಧಾನಪರಿಷತ್‌ ಸದಸ್ಯ. 

Advertisement

ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಡಿಯೂರಪ್ಪ ಪ್ರಕರಣದಲ್ಲಿ ನ್ಯಾಯಾಲಯ ಏಕೆ ತಡೆಯಾಜ್ಞೆ ನೀಡಿದೆ ಗೊತ್ತಿಲ್ಲ. ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
-ಡಾ. ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next