ಬೆಂಗಳೂರು: ರಾಜ್ಯದಲ್ಲಿ ಬಾಕಿ ಉಳಿದಿರುವ ಎಲ್ಲಾ ಲಂಬಾಣಿ ತಾಂಡಾಗಳನ್ನೂ ಕಂದಾಯ ಗ್ರಾಮಗಳನ್ನಾಗಿ ಘೋಷಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಸಂತ ಶ್ರೀ ಸೇವಾಲಾಲ್ ಜಯಂತಿ” ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಬಾಕಿ ಉಳಿದಿರುವ ತಾಂಡಾಗಳನ್ನೂ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. “ವಾಸಿಸುವವನೇ ಮನೆಯ ಒಡೆಯ’ಎನ್ನುವ ಕಾನೂನು ತಂದಿದ್ದು ನಮ್ಮ ಸರ್ಕಾರ. ಇದರಿಂದಾಗಿ ತಾಂಡಾಗಳಲ್ಲಿ ನೆಲೆಸಿದ್ದ ಬಂಜಾರ ಸಮುದಾಯದವರಿಗೆ ಬಹಳಷ್ಟು ಸಹಾಯವಾಗಿದೆ ಎಂದು ಹೇಳಿದರು.
ಸೂರಗೊಂಡನ ಕೊಪ್ಪದಲ್ಲಿ ವಸತಿ ನಿಲಯ: ಸಂತ ಶ್ರೀ ಸೇವಾಲಾಲ್ ಜನ್ಮಸ್ಥಳವಾದ ಸೂರಗೊಂಡನಕೊಪ್ಪದಲ್ಲಿ ವಸತಿ ನಿಲಯ ಮಾಡಿಕೊಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಬೇಕಾದರೆ ಅದಕ್ಕೆ ಬೇಕಾದ ಅನುದಾನವನ್ನು ರಾಜ್ಯ ಸರ್ಕಾರ ಕೊಡುತ್ತದೆ ಎಂದು ಭರವಸೆ ನೀಡಿದರು.
ಸಮುದಾಯದ ಜೊತೆಗಿದ್ದೇನೆ: ಸಚಿವ ಶಿವರಾಜ್ ಎಸ್.ತಂಗಡಗಿ ಮಾತನಾಡಿ, ಮೀಸಲಾತಿ ವಿಚಾರದಲ್ಲಿ ನಾನು ಬಂಜಾರ ಸಮುದಾಯದ ಜೊತೆಗೆ ಎಂದಿಗೂ ಇರುತ್ತೇನೆ. ಜಾತಿ ಜಾತಿಗಳ ಮಧ್ಯೆ ಕೆಲವರು ಸಂಘರ್ಷ ಉಂಟಾಗುವ ಕೆಲಸ ಮಾಡುತ್ತಾ ಬಂದಿದ್ದಾರೆ. ಅದಕ್ಕೆ ಸಮಾಜದ ಬಂಧುಗಳು ಹೆದರುವ ಅಗತ್ಯವಿಲ್ಲ. ಬಂಜಾರ ಸಮುದಾಯದ ಮುಖಂಡರ ಜೊತೆಗೆ ಚರ್ಚೆ ನಡೆಸಿ ಈ ಸಮುದಾಯದ ರಕ್ಷಣೆಗೆ ಸದಾ ನಾವು ಕಟಿಬದ್ದರಾಗಿದ್ದೇವೆ ಎಂದರು.
ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಸಾಹಿತಿ ಬಿ.ಟಿ.ಲಲಿತಾ ನಾಯಕ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.