ಬೆಂಗಳೂರು: ಕಾಂಗ್ರೆಸ್ ತೊರೆದು ಇಂದು ಜೆಡಿಎಸ್ ಪಕ್ಷ ಸೇರ್ಪಡೆಯಾದ ಸಿ.ಎಂ.ಇಬ್ರಾಹಿಂ ಅವರು ಇಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಪಕ್ಷದ ಶಾಲು ಹೊದಿಸಿ ಪಕ್ಷದ ಬಾವುಟ ನೀಡಿದರು.
ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾಗಿದ್ದ ಎಚ್ ಕೆ ಕುಮಾರಸ್ವಾಮಿ ಅವರು ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಸಿ.ಎಂ ಇಬ್ರಾಹಿಂ, ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಧನ್ಯವಾದ. ಎಚ್.ಕೆ.ಕುಮಾರಸ್ವಾಮಿ ಅವರು ನನಗಿಂತ ದೊಡ್ಡ ಹುದ್ದೆ ಪಡೆದಿದ್ದಾರೆ. ಕಾಲಭೈರವ ಎದ್ದು ಕುಣಿಯು ಸಮಯ ಬಂದಿದೆ. ಜಲವಾಹನ ಹೊರಟಿದೆ ಮಾಹಲಿಂಗನ ಮೇಲೆ ಅಭಿಷೇಕ ಪ್ರಾರಂಭವಾಗುತ್ತದೆ ಎಂದರು.
ಕಿವಿಗೆ ಹೂ ಇಟ್ಕೊಂಡ್ ಬಂದವರು ನೀವು ಮುಂಡೆವ, ದೇವೇಗೌಡರ ತಾಕತ್ತು ನಿಮಗೇನ್ ಗೊತ್ತು? ಇವರುಗಳಿಗೆ ವೋಟಿನ ಚಿಂತೆ, ನಮಗೆ ಜನರ ಚಿಂತೆ. ಯಾರು ಬೇಕಾದರೂ ಕೈ ಬಿಡಲಿ, ನೀವು ಕೈ ಬಿಡಬೇಡಿ. ನಾಳೆಯಿಂದ ಎಲ್ಲಾ ಕಡೆ ಜೆಡಿಎಸ್ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ. ಬಿಜೆಪಿ ಕಾಂಗ್ರೆಸ್ ನಲ್ಲಿ ಹೋರಾಟ ಮಾಡಲಾಗುವುದಿಲ್ಲ. ನಾನು ಇವತ್ತು ಹರಹರ ಮಹಾದೇವ ಅಂತ ಜೋಳಿಗೆ ತಗೊಂಡು ಹೋಗುತ್ತಿದ್ದೇನೆ ಎಂದರು.
ಇದನ್ನೂ ಓದಿ:ಅಯೋಧ್ಯೆಯಂತೆ ಅಂಜನಾದ್ರಿ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ: ಸಂಸದ ಪ್ರತಾಪ್ ಸಿಂಹ
ಹೆಚ್ ಕೆ ಕುಮಾರಸ್ವಾಮಿ ಮಾತನಾಡಿ, ‘ಪಕ್ಷದ ಅಧ್ಯಕ್ಷ ಸ್ಥಾನವನ್ನು ನನ್ನಿಂದ ಹಸ್ತಾಂತರ ಮಾಡಲಾಗಿದೆ. ಯುವಕರ ಪರ್ವ ಆರಂಭವಾಗಿದೆ. ಪ್ರಜಾಪ್ರಭುತ್ವದಲ್ಲಿ ಯಾವುದು ಶಾಶ್ವತ ಅಲ್ಲ. ನಾನು ಯಾವುದನ್ನು ಬಯಸದೆ ಬಂದವರು’ ಎಂದು ವೇದಿಕೆ ಮೇಲೆ ಭಾವುಕರಾದರು.
ನನ್ನ ಭಾವುಕತೆಯನ್ನು ಯಾರು ತಪ್ಪಾಗಿ ಭಾವಿಸಬಾರದು. ನಾನು ಕೋರ್ಟ್ ನಲ್ಲಿದ್ದಾಗ ನನಗೆ ಬಿ ಫಾರ್ಮ್ ಕೊಟ್ಟು ಬನ್ನಿ ಎಂದು ಸಿದ್ದರಾಮಯ್ಯ ಅವರ ಕೈನಲ್ಲಿ ಕಳುಹಿಸಿದ್ದರು. ಈಗ ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ ಎಂದ ಅವರು, ನಾವು ಕೂಡಾ ಅಹಿಂದವೇ, ಇಬ್ರಾಹಿಂ ‘ಅ’, ಬಂಡೆಪ್ಪ ‘ಹಿ’, ನಾನು ‘ದ’. ನಮ್ಮದೂ ಅಹಿಂದ ಎಂದರು.