ಬೆಂಗಳೂರು: ಕಾಂಗ್ರೆಸ್‌ನಿಂದ ಮಾನಸಿಕವಾಗಿ ದೂರವಾಗಿ ಜೆಡಿಎಸ್‌ನತ್ತ ಚಿತ್ತ ಹರಿಸಿದ್ದ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದ ಸಿ.ಎಂ.ಇಬ್ರಾಹಿಂ, ಭಾನುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಸಿ.ಎಂ.ಇಬ್ರಾಹಿಂ ಅವರ ನಡೆ ರಾಜಕೀಯ ವಲಯದಲ್ಲಿ ಅಚ್ಚರಿಮೂಡಿಸಿದೆ.
ಇದರ ಬೆನ್ನಲ್ಲೇ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಗಳು ಎಂದು ಹೇಳಲಾದ ಅಲ್ಲಂ ವೀರಭದ್ರಪ್ಪ ಹಾಗೂ ಸಲೀಂ ಅಹಮದ್ ಸಹ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.
ವಿಜಯಪುರ -ಬಾಗಲಕೋಟೆ ಕ್ಷೇತ್ರದಿಂದ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ವಂಚಿತ ಎಸ್.ಆರ್.ಪಾಟೀಲ್ ಅವರು ಪ್ರಸ್ತುತ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದು ಜ.5ಕ್ಕೆ ಅವರ ಸದಸ್ಯತ್ವ ಅವಧಿ ಮುಗಿಯುವುದರಿಂದ ಪ್ರತಿಪಕ್ಷ ಸ್ಥಾನ ತೆರವಾಗಲಿದೆ. ಆ ಸ್ಥಾನದ ಮೇಲೆ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್, ನಸೀರ್ ಅಹಮದ್, ಅಲ್ಲಂ ವೀರಭದ್ರಪ್ಪ, ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಸ್ಪರ್ಧೆ ಮಾಡಿರುವ ಸಲೀಂ ಅಹಮದ್ ಆಕಾಂಕ್ಷಿಗಳಾಗಿದ್ದಾರೆ.
ಬಿ.ಕೆ.ಹರಿಪ್ರಸಾದ್ ಅವರ ಮೇಲೆ ಹೈಕಮಾಂಡ್ ಒಲವು ಇದೆ. ಆದರೆ, ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಸಿಕ್ಕಂತಾಗುತ್ತದೆ ಎಂಬ ಮಾತುಗಳು ಬರಬಹುದು. ಹೀಗಾಗಿ, ಲಿಂಗಾಯಿತ ಅಥವಾ ಮುಸ್ಲಿಂ ಸಮುದಾಯಕ್ಕೆ ಅವಕಾಶ ಕೊಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ದೂರವಾಗದ ಮುನಿಸು
ಪರಿಷತ್ ಟಿಕೆಟ್ ವಂಚಿತ ಎಸ್.ಆರ್.ಪಾಟೀಲ್ ಅವರ ಮುನಿಸು ಇನ್ನೂ ದೂರವಾಗಿಲ್ಲ. ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಹಾಜರಾಗುವುದಿಲ್ಲ, ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು ಎಂದು ಹೇಳಲಾಗಿದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಎಸ್.ಆರ್.ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಮನವೊಲಿಕೆ ಪ್ರಯತ್ನ ನಡೆಸಿದ್ದರು ಎಂದು ತಿಳಿದು ಬಂದಿದೆ.