ಬೆಂಗಳೂರು: ಪರಿಸರ ಸ್ನೇಹಿ ಸಾರಿಗೆ ಉತ್ತೇಜಿಸುವ ಸಲುವಾಗಿ ಬಾಡಿಗೆಗೆ ಸೈಕಲ್‌ಗಳನ್ನು ಒದಗಿಸುವ ಸಾರ್ವಜನಿಕ ಬೈಸಿಕಲ್ ಹಂಚಿಕೆ ವ್ಯವಸ್ಥೆಗೆ (ಪಿಬಿಎಸ್) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದ ಮುಂಭಾಗ ಸೋಮವಾರ ಹಸಿರು ನಿಶಾನೆ ತೋರಿದರು.
ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಹಾಗೂ ಬಿಬಿಎಂಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಬಿಎಸ್ ಯೋಜನೆಗೆ ಚಾಲನೆ ನೀಡಿದ ಕುಮಾರಸ್ವಾಮಿ, ನಗರದಲ್ಲಿ ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಬಾಡಿಗೆ ಆಧಾರದಲ್ಲಿ ಸೈಕಲ್ ಒದಗಿಸುವ ಟ್ರಿಣ್ ಟ್ರಿಣ್ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
“ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಸೇವೆ ಯಶಸ್ವಿಯಾಗಿದೆ. ಅದೇ ರೀತಿ ಬೆಂಗಳೂರಿನ ಆಯ್ದ ಕಡೆಗಳಲ್ಲಿ ಆ್ಯಪ್ ಮುಖಾಂತರ ಬಾಡಿಗೆಗೆ ಸೈಕಲ್‌ಗಳು ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ 6000 ಸೈಕಲ್‌ಗಳು ಬಾಡಿಗೆಗೆ ಸಿಗಲಿವೆ ಎಂದು ತಿಳಿಸಿದರು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಪಿಬಿಎಸ್ ಯೋಜನೆಯ ಮೊದಲ ಹಂತದಲ್ಲಿ ನಗರದ ಕೇಂದ್ರ ಭಾಗದಲ್ಲಿ 400 ಪಾರ್ಕಿಂಗ್ ಹಬ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂದರು.
24 ಗಂಟೆ ಲಭ್ಯ: ದಿನದ 24 ಗಂಟೆಯೂ ಬೈಸಿಕಲ್ ಸೇವೆ ಲಭ್ಯವಿರಲಿದೆ. ಸೈಕಲ್ ಬಳಸಲು ಬಯಸುವವರು ಸಂಬಂಧಪಟ್ಟ ಕಂಪೆನಿಯ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ನಂತರ 100 ರೂ. ಠೇವಣಿ ಇಡಬೇಕು. ಆ್ಯಪ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಸೈಕಲ್‌ನ ಬೀಗ ತೆರೆದುಕೊಳ್ಳುತ್ತದೆ.
ನಿಗದಿತ ಸ್ಥಳ ತಲುಪಿದ ಬಳಿಕ ಸಮೀಪದ ಪಾರ್ಕಿಂಗ್ ಹಬ್‌ನಲ್ಲಿ ಸೈಕಲ್ ನಿಲುಗಡೆ ಮಾಡಬಹುದು. ಬಳಕೆ ಅವಧಿಗೆ ತಕ್ಕಂತೆ ಶುಲ್ಕ ಕಡಿತವಾಗುತ್ತದೆ. ಸೈಕಲ್‌ಗಳು ಜಿಪಿಎಸ್ ವ್ಯವಸ್ಥೆ, ಡಾಕ್‌ಲೆಸ್ ತಂತ್ರಜ್ಞಾನ (ಮೊಬೈಲ್ ಆ್ಯಪ್ ನೆರವಿನಿಂದ ಕೀಲಿ ತೆರೆಯುವ) ಹೊಂದಿದೆ. ಪಾರ್ಕಿಂಗ್ ಹಬ್ ವಿವರ, ಸೈಕಲ್ ಲಭ್ಯತೆ, ಬಾಡಿಗೆ ದರ ಎಲ್ಲ ಮಾಹಿತಿ ಆ್ಯಪ್‌ನಲ್ಲಿ ಸಿಗಲಿದೆ. ಮೊದಲ 30 ನಿಮಿಷಕ್ಕೆ 10 ರೂ. ನಂತರದ ಪ್ರತಿ 30 ನಿಮಿಷಕ್ಕೆ 5 ರೂ. ಬಾಡಿಗೆ ವಿಧಿಸಲಾಗಿದೆ.
ಸೈಕಲ್ ಮಾದರಿಯಲ್ಲಿರುವ ಬ್ಯಾಟರಿ ಚಾಲಿತ ಇ- ಬೈಕ್‌ಗಳು ಬಾಡಿಗೆಗೆ ಸಿಗಲಿವೆ. ವಿಧಾನಸೌಧ, ಎಂ.ಜಿ.ರಸ್ತೆ, ಕಬ್ಬನ್‌ಪಾರ್ಕ್, ಇಂದಿರಾನಗರ, ದೊಮ್ಮಲೂರಿನಲ್ಲಿ “ಯುಲು’ ಕಂಪೆನಿಯ ಇ-ಬೈಕ್ ಬಾಡಿಗೆಗೆ ದೊರೆಯುತ್ತವೆ.
ಬಿಬಿಎಂಪಿ ಟೆಂಡರ್: ಪಿಬಿಎಸ್ ವ್ಯವಸ್ಥೆಯಡಿ ನಗರದ ಕೇಂದ್ರ ಭಾಗದಲ್ಲಿ 400 ಪಾರ್ಕಿಂಗ್ ಹಬ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಇದರಲ್ಲಿ 270 ಹಬ್ ನಿರ್ಮಾಣಕ್ಕೆ ಬಿಬಿಎಂಪಿ ಟೆಂಡರ್ ಆಹ್ವಾನಿಸಿದೆ. ಮೆಟ್ರೋ ನಿಲ್ದಾಣಗಳು ಸೇರಿದಂತೆ ವಿಧಾನಸೌಧ, ಎಂ.ಜಿ.ರಸ್ತೆ, ಇಂದಿರಾನಗರ, ಎಚ್‌ಬಿಆರ್ ಲೇಔಟ್, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯ 28.5 ಕಿ.ಮೀ. ವ್ಯಾಪ್ತಿಯಲ್ಲಿ ಬೈಸಿಕಲ್ ನಿಲುಗಡೆ ತಾಣ ನಿರ್ಮಾಣವಾಗಲಿದೆ.
ಪ್ರತಿ 300 ಮೀಟರ್ ಅಂತರದಲ್ಲಿ ಸೈಕಲ್ ನಿಲುಗಡೆ ತಾಣಗಳಿರಲಿವೆ. “ಯುಲು’ ಕಂಪೆನಿಯು ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಇಂದಿರಾನಗರ, ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು 2,300 ಸೈಕಲ್‌ಗಳನ್ನು ಬಾಡಿಗೆಗೆ ಒದಗಿಸುತ್ತಿದೆ. ಪ್ರತಿ ಸೈಕಲ್‌ಗೆ ವಾರ್ಷಿಕ 50 ರೂ. ಶುಲ್ಕ ನಿಗದಿಪಡಿಸಿ ಪರವಾನಗಿ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.