Advertisement

ಸಿಎಂ ಕೃಷಿ ಪಾಠ ಅಗತ್ಯವಿಲ್ಲ: ಎಚ್‌ಡಿಕೆ

03:45 AM Jun 26, 2017 | Harsha Rao |

ಉಡುಪಿ: ರಾಜಕಾರಣಕ್ಕೆ ಬರುವ ಮೊದಲು ನಾನು ಗದ್ದೆಯಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರಿಂದ ನನಗೆ ಕೃಷಿ ಪಾಠದ ಅಗತ್ಯವಿಲ್ಲ ಎಂದು ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

Advertisement

ರವಿವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ಮಾಡಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಹಾಸನದಲ್ಲಿ ರವಿವಾರ ಸಿಎಂ ಅವರು, ಎಚ್‌ಡಿಕೆಗೆ ಸಿಎಂ ಆಗೋ ಕನಸು. ಮಣ್ಣಿನ ಮಕ್ಕಳು ಅಂತಾ ಹೇಳುತ್ತಾರೆ. ಆದರೆ ನಾನು ಡಿಗ್ರಿ ಓದುವಾಗಲೂ ಚಡ್ಡಿ ಹಾಕಿ ಗದ್ದೆಯಲ್ಲಿ ಕೆಲಸ ಮಾಡಿದ್ದೇನೆ. ನಾನೇ ನಿಜವಾದ ರೈತ ಎಂದು ಹೇಳಿದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಎಚ್‌ಡಿಕೆ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯನವರು ಉದ್ಧಟತನದಿಂದ ಲಘುವಾಗಿ ಮಾತನಾಡುತ್ತಿದ್ದಾರೆ. ನೈಜ ರೈತನಾದ ನನಗೆ ರೈತರ ಬಗ್ಗೆ ಕಾಳಜಿ ಇದೆ. 1997ರ ವರೆಗೂ ನಾನು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದೆ. ಕೃಷಿ ಬದುಕು ನನ್ನಲ್ಲಿದೆ. ಅವರೇನೂ ನನಗೆ ಕಲಿಸಿಕೊಡಬೇಕಾಗಿಲ್ಲ. ರೈತರ ಪೇಟೆಂಟ್‌ ಪಡೆಯಲು ಅವರಿಗೆ ಸಾಧ್ಯವಿಲ್ಲ ಎಂದರು.

ಹೊಸದಿಲ್ಲಿಯಿಂದ ಗುಲಾಂ ನಬಿ ಅಜಾದ್‌ ಅವರು ನನಗೆ ಹಾಗೂ ದೇವೇಗೌಡರಿಗೆ ಕರೆ ಮಾಡಿ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್‌ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅವರನ್ನು ಬೆಂಬಲಿಸಲು ಜೆಡಿಎಸ್‌ ನಿರ್ಧರಿಸಿದೆ ಎಂದು ಹೇಳಿದರು.

ಕೃಷ್ಣ ದರ್ಶನ: ನಷ್ಟ ಸಿಎಂಗೆ
ರಾಷ್ಟ್ರಪತಿಯವರು ಉಡುಪಿ ಜಿಲ್ಲೆಗೆ ಬಂದು ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಡುವಾಗ ಬರುವಂತೆ ಸಿಎಂ ಅವರಿಗೆ ಪೇಜಾವರ ಶ್ರೀಗಳು ಆಹ್ವಾನ ನೀಡಿದ್ದರೂ, ಸಿಎಂ ತಿರಸ್ಕರಿಸಿರುವುದರಿಂದ ಪೇಜಾವರ ಶ್ರೀ, ಮಠಕ್ಕೆ, ಶ್ರೀಕೃಷ್ಣನಿಗೆ ಏನೂ ನಷ್ಟವಿಲ್ಲ. ಆದರೆ ಸಣ್ಣತನದಿಂದ ಸಿದ್ದರಾಮಯ್ಯನವರಿಗೆ ಖಂಡಿತಾ ನಷ್ಟವಿದೆ. ಕೃಷ್ಣನಿಗೆ ಅಪಾರ ಭಕ್ತರಿದ್ದಾರೆ ಎಂದರು.

Advertisement

ಮರುಕಳಿಸಲಿದೆ ಮೊಲಿ ಕಾಲ?
ಸಿಎಂ ಉಡಾಫೆತನದಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ನೆಲಕ್ಕಚ್ಚಿ ಹೋಗಲಿದೆ. ರಾಜ್ಯದಲ್ಲಿ ವೀರಪ್ಪ ಮೊಲಿ ಸಿಎಂ ಆಗಿದ್ದಾಗ ಕಾಂಗ್ರೆಸ್‌ 38 ಸ್ಥಾನಗಳಿಗೆ ಕುಸಿದಿತ್ತು. ಅದಕ್ಕಿಂತಲೂ ಕಳಪೆ ಫ‌ಲಿತಾಂಶ ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಗಲಿದೆ. ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದರು ಎಚ್‌ಡಿಕೆ.

ಸಾಲಮನ್ನಾ: ಸಿಎಂ ಟೋಪಿವಾಲ !
ರೈತರ 50,000 ರೂ. ಕೃಷಿ ಸಾಲ ಮನ್ನಾ ಮಡುವುದಾಗಿ ಸಿಎಂ ಘೋಷಿಸಿದ್ದಾರೆ. ಟೋಪಿವಾಲ ಕಥೆ ಇದೆ. ಸಾಲಮನ್ನಾದ ಹಣೆಬರಹವನ್ನು ನಾನು ಇನ್ನೊಂದು ತಿಂಗಳು ಬಿಟ್ಟು ಹೇಳುವೆ ಎಂದು ಎಚ್‌ಡಿಕೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next