Advertisement

ಸಿಎಂ ಬದಲಾವಣೆ ವಿರೋಧಿಗಳ ಅಪಪ್ರಚಾರ

03:07 PM Jan 04, 2022 | Team Udayavani |

ಸಿಂಧನೂರು: ಮುಖ್ಯಮಂತ್ರಿ ಬದಲಾವಣೆ ಎಂಬುದು ಅವರು ಪದಗ್ರಹಣ ಮಾಡಿದ ದಿನಗಳಿಂದಲೂ ವಿರೋಧಿಗಳು ಹಬ್ಬಿಸುತ್ತಿರುವ ಗಾಳಿಸುದ್ದಿ. ಅವರು ಸಮರ್ಥವಾಗಿ ಆಡಳಿತ ನೀಡುತ್ತಿದ್ದು, ಪಕ್ಷದ ರಾಷ್ಟ್ರೀಯ ನಾಯಕರೇ ಈ ವದಂತಿಗೆ ತೆರೆ ಎಳೆದಿದ್ದಾರೆ. ಸಿಎಂ ಬದಲಾವಣೆ ಪ್ರಶ್ನೆಯಿಲ್ಲ ಎಂದು ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹುಸಿ ಮಾಹಿತಿ ಹಬ್ಬಿದಾಗ ರಾಷ್ಟ್ರೀಯ ನಾಯಕರು ಸಾರ್ವಜನಿಕವಾಗಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೂ, ಕಾಂಗ್ರೆಸ್‌ ನವರು ಮತ್ತು ವಿರೋಧಿಗಳು ಇದರಲ್ಲಿ ಹುಳುಕು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಕೆ.ಎಸ್‌. ಈಶ್ವರಪ್ಪನವರು ಈ ಹಿಂದೆ ಏನು ಹೇಳಿದ್ದರೋ ಗೊತ್ತಿಲ್ಲ. ಈಗಲೂ ಅವರು ಯಾವುದೇ ಅಪಸ್ವರ ತೆಗೆದಿಲ್ಲ ಎಂದರು. ಮುಂದಿನ ಚುನಾವಣೆಗೆ ಸಿದ್ಧತೆ: ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸಿದ್ಧತೆ ನಡೆಸಲಾಗಿದೆ. ಲೋಪ ದೋಷಗಳನ್ನು ಸರಿಪಡಿಸಿಕೊಂಡು ಸಮರ್ಥವಾಗಿ ಚುನಾವಣೆ ಎದುರಿಸಿ, ರಾಜ್ಯದಲ್ಲಿ ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ರಾಜಕೀಯ ಪ್ರೇರಿತ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ನವರಿಗೆ ಮೇಕೆದಾಟು ನೆನಪಾಗುತ್ತದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು.

ಸ್ಥಾನಮಾನ ಬಯಸಿ ನಾನು ಪಕ್ಷದಲ್ಲಿ ಕೆಲಸ ಮಾಡುತ್ತಿಲ್ಲ. ನನಗೆ ಬಿಜೆಪಿ ನೀಡುವ ಜವಾಬ್ದಾರಿ ನಿರ್ವಹಿಸುತ್ತೇನೆ. ಮುಂದಿನ ಒಂದು ತಿಂಗಳಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಅವರಿಗೆ ಸ್ಥಾನಮಾನದ ಕುರಿತು ಪಕ್ಷ ಉತ್ತಮ ಸುದ್ದಿ ನೀಡಲಿದೆ ಎಂದರು.

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌, ಬಿಜೆಪಿ ಮುಖಂಡರಾದ ಕೊಲ್ಲಾ ಶೇಷಗಿರಿರಾವ್‌, ಎನ್‌.ಶಿವನಗೌಡ ಗೊರೇಬಾಳ, ಅಮರೇಗೌಡ ವಿರುಪಾಪುರು, ಮಧ್ವರಾಜ ಆಚಾರ್‌, ಹನುಮೇಶ ಸಾಲಗುಂದಾ, ಪ್ರೇಮ ಸಿದ್ಧಾಂತಿಮಠ, ಸುಬ್ಬರಾವ್‌, ಮಲ್ಲಿಕಾರ್ಜುನ ಜೀನೂರು,ಯಲ್ಲುಸಾ ಬದಿ, ಸಿದ್ದು ಹೂಗಾರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next