ವಿಜಯಪುರ: ಬಿ.ಎಸ್. ಯಡಿಯೂರಪ್ಪ ಸರ್ಕಾರದ ವಿರುದ್ಧ ನಿರಂತರ ಗುಡುತ್ತಲೇ ಇರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶನಿವಾರ ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ್ದಾರೆ. ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೂ, ಯತ್ನಾಳ್ ಬೆಂಗಳೂರು ಭೇಟಿಗೂ ರಾಜಕೀಯ ತಳುಕು ಹಾಕಲಾಗುತ್ತಿದೆ.
ವಾರದ ಹಿಂದೆ ಬೆಂಗಳೂರಿನಿಂದ ಮರಳಿದ್ದ ಯತ್ನಾಳ್, ಎಂದಿನಂತೆ ಕೋವಿಡ್ ನಿಯಂತ್ರಣಕ್ಕಾಗಿ ನಿತ್ಯವೂ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶನಿವಾರ ಪರಿಸರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಅಲ್ಲದೇ ಸಿ.ಎಂ. ಬದಲಾವಣೆ ವಿಷಯವಾಗಿ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದಿದ್ದರು. ಇದರ ಬೆನ್ನಲ್ಲೇ ಭಾನುವಾರ ನಗರದಲ್ಲಿನ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಬಿಟ್ಟು ಶನಿವಾರ ರಾತ್ರಿಯೇ ಬೆಂಗಳೂರಿಗೆ ತೆರಳಿರುವುದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ಯಾವಾಗ ಕೇಳುತ್ತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ: ನಾಯಕತ್ವ ಬದಲಾವಣೆ ವಿಚಾರಕ್ಕೆ ಸಿಎಂ
ಹೈಕಮಾಂಡ್ ಸೂಚಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಪಕ್ಷದಲ್ಲಿ ನಾಯಕರಿಗೆ ಕೊರತೆ ಇಲ್ಲ ಎಂದು ಯಡಿಯೂರಪ್ಪ ಹೇಳಿರುವುದು ಶಾಸಕ ಯತ್ನಾಳ್ ಗೆ ಹೈಕಮಾಂಡ ಸೂಚನೆ ರವಾನೆ ನೀಡಿದೆಯೇ ಎಂಬ ಗುಮಾನಿಗೆ ಕಾರಣವಾಗಿದೆ.
ಕೋವಿಡ್ ನಿರ್ವಹಣೆ, ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ವಿರುದ್ಧ ಹರಿಹಾಯುತ್ತಲೇ ಇರುವ ಸ್ವಪಕ್ಷೀಯ ಬಿಜೆಪಿ ಶಾಸಕ ಯತ್ನಾಳ, ರಾಜ್ಯದ ಉಪ ಚುನಾವಣೆ ಬಳಿಕ ಮುಖ್ಯಮಂತ್ರಿ ರಾಜೀನಾಮೆ ಖಚಿತ. ಹೈಕಮಾಂಡ್ ನಿಂದ ನನಗೆ ಇಂಥದ್ದೊಂದು ಸೂಚನೆ ಸಿಕ್ಕಿದೆ ಎಂದೆಲ್ಲಾ ಹೇಳುತ್ತಲೇ ಇದ್ದರು.
ಇದೀಗ ಸ್ವಯಂ ಯಡಿಯೂರಪ್ಪ ಅವರೇ ಹೈಕಮಾಂಡ್ ಸೂಚಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿರುವುದು, ಶಾಸಕ ಯತ್ನಾಳ್ ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿರುವುದು ಯತ್ನಾಳ ಅವರಿಗೆ ಸಿ.ಎಂ. ಬದಲಾವಣೆಯ ಬಗ್ಗೆ ಹೈಕಮಾಂಡನಿಂದ ನಿಖರ ಸೂಚನೆ ಸಿಕ್ಕಿದೆ ಎಂದೇ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.