Advertisement

ದಿವ್ಯಾ ಹಾಗರಗಿ ಬಂಧಿಸಿದ ನಂತರ ಸಿಎಂ ಕಲಬುರಗಿಗೆ ಬರಲಿ: ಬಿ.ಆರ್. ಪಾಟೀಲ್

04:08 PM Apr 20, 2022 | Team Udayavani |

ಕಲಬುರಗಿ: ಪಿಎಸ್ಐ ನೇಮಕಾತಿಯ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನ ಮಾಡದೇ ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ಬಿ.ಆರ್. ಪಾಟೀಲ್, ಹಾಗರಗಿ ಬಂಧನ ನಂತರವೇ ಮುಖ್ಯಮಂತ್ರಿ ಕಲಬುರಗಿ ಗೆ ಬರಲಿ ಎಂದು ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. 40% ಕಮಿಷನ್, ಮಠ ಮಾನ್ಯಗಳಿಂದಲೂ ಶೇ.30% ಕಮಿಷನ್ ಪಡೆಯುತ್ತಿರುವುದು ಹಾಗೂ ಅವರದ್ದೇ ಪಕ್ಷದ ನಾಯಕಿ ಪರೀಕ್ಷೆ ಅಕ್ರಮ ನಡೆಸಿ ಕೋಟ್ಯಂತರ ವ್ಯವಹಾರ ನಡೆಸಿರುವಾಗ ಯಾವ ಮುಖ ಹೊತ್ತುಕೊಂಡು ಕಲಬುರಗಿಗೆ ಸಿಎಂ ಬರುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿರುವ ದಿವ್ಯಾ ಹಾಗರಗಿ ಬಂಧಿಸುವುದು ದೊಡ್ಡ ಕೆಲಸವಲ್ಲ.‌ ಬಿಜೆಪಿ ನಾಯಕಿ ಎಂಬ ಕಾರಣಕ್ಕೆ ಬಂಧಿಸುತ್ತಿಲ್ಲ. ಬಿಜೆಪಿ ಯಾವುದೇ ನಾಯಕರು ಹಾಗೂ ಸಚಿವರು ಕಲಬುರಗಿ ಬಂದರೆ ಅವರೆಲ್ಲರೂ ದಿವ್ಯಾ ಹಾಗರಗಿ ಮನೆಗೆ ಹೋಗುತ್ತಾರೆ.‌ ಸಚಿವ ಶ್ರೀರಾಮಲು, ಕೆ.‌ಸುಧಾಕರ್ ರಿಂದ ಹಿಡಿದು ದೊಡ್ಡ ಪಟ್ಟಿಯೇ ಇದೆ. ಅದೇ ರೀತಿ ಜಿಲ್ಲಾ ನಾಯಕರೂ ಸಹ ಹೋಗುತ್ತಾರೆ.  ಇಷ್ಟಿದ್ದ ಮೇಲೂ ಪಕ್ಷದ ನಾಯಕಿ ಅಲ್ಲ. ಪಕ್ಷಕ್ಕೂ ಅವರಿಗೂ ಸಂಬಂಧವಿಲ್ಲ‌ ಎನ್ನುವುದು ನಾಚಿಕೆಗೇಡಿತನ ಸಂಗತಿ. ದಿವ್ಯಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಲ್ಲದೇ ದಿಶಾ ಸಮಿತಿ ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಸದಸ್ಯರಾಗಿದ್ದರೂ, ಬಿಜೆಪಿಗೆ ಸಂಬಂಧವಿಲ್ಲ‌ ಎನ್ನುತ್ತಿದ್ದಾರೆ. ಬಿಜೆಪಿಗೆ ಮಾನ- ಮರ್ಯಾದೆ ಸ್ವಲ್ಪವಾದರೂ ಇದೆಯಾ? ಎಂಬ ಅನುಮಾನ ಮೂಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ನಿಮ್ಮನ್ನ ಚೌಕಿದಾರ ಅಂತ ಕರೆಯಬೇಕಾ? : ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಗೃಹ ಸಚಿವರಂತು ಮನೆಗೆ ಹೋಗಿ ಉಪಹಾರ ಸೇವಿಸಿ ಬಂದಿದ್ದಾರೆ.‌ ಆದರೆ ಯಾರೋ ಕರೆದುಕೊಂಡು ಹೋಗಿದ್ದರಿಂದ ಮನೆಗೆ ಹೋಗಿದ್ದೆ ಎಂದು ಗೃಹ ಸಚಿವರು ಹೇಳುವುದನ್ನು ನೋಡಿದರೆ ನಗು ಬರುತ್ತದೆ. ಸಚಿವರಿಗೆ ಹಿನ್ನೆಲೆ ಗೊತ್ತಿರದಿದ್ದರೂ ಪೊಲೀಸ್ ಅಧಿಕಾರಿಗಳಿಗೆ ಎಲ್ಲವೂ ಗೊತ್ತಿರುತ್ತದೆ.‌ ಅವರಿಂದಾದರೂ ಮಾಹಿತಿ ಪಡೆಯಬೇಕಿತ್ತು ಎಂದರು.

Advertisement

ಸಿಐಡಿ ಗೃಹ ಇಲಾಖೆ ಅಡಿಯಲ್ಲಿ ಬರುವುದರಿಂದ, ನ್ಯಾಯಯುತವಾಗಿ ತನಿಖೆ ನಡೆಯುವುದು ಅಸಾಧ್ಯ. ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು. ಆರೋಪಿಯೊಬ್ಬರನ್ನು ಬಂಧಿಸಲಿಕ್ಕಾಗದವರು ಹೇಗೆ ತನಿಖೆ ಮಾಡುತ್ತಾರೆ? ದಿವ್ಯಾ ಹಾಗರಗಿ ಒಂದು ಪಡೆ ಕಟ್ಟಿಕೊಂಡು ಹಣ ಮಾಡುವ ದಂಧೆಯನ್ನೇ ಮೈಗೂಡಿಸಿಕೊಂಡಿದ್ದಾರೆ. ಸಿಎಂ‌ ಹಾಗೂ ಗೃಹ ಸಚಿವರಿಗೆ ಏನಾದರೂ ನೈತಿಕತೆ ಇದ್ದರೆ ಮೊದಲು ಅವರನ್ನು ಬಂಧಿಸಲಿ ಎಂದು ಸವಾಲು ಹಾಕಿದರು.

ಆರೋಪಿಯಿಂದ ಸನ್ಮಾನ

ದಿವ್ಯಾ ಹಾಗರಗಿ, ಆರ್‍ ಟಿಐ ಕಾರ್ಯಕರ್ತ ಹಾಗೂ ಇತರರನ್ನು ಒಳಗೊಂಡ ಒಂದು ದೊಡ್ಡ ಲೂಟಿ ಗ್ಯಾಂಗ್ ಇದೆ. ಆರ್‍ ಟಿಐ ಅಡಿ ಅರ್ಜಿ ಹಾಕುವುದು, ನಂತರ ದಿವ್ಯಾ ಹಾಗರಗಿ ನೇತೃತ್ವದಲ್ಲಿ ವ್ಯವಹಾರ ಕುದುರಿಸಿ ಹಣ ಮಾಡುವುದೇ ಒಂದು ದೊಡ್ಡ ದಂಧೆ ಮಾಡಿಕೊಂಡಿದ್ದಾರೆ. ಇವರ ಜತೆ ಇತರ ಕೆಲವರು ಸೇರಿಕೊಂಡು ಅಧಿಕಾರಿಗಳಿಂದ ಬೆದರಿಸಿ ಹಣ ಕೀಳುವುದೇ ವ್ಯವಸ್ಥಿತ ಮಾರ್ಗ ಮಾಡಿಕೊಂಡಿರುವುದು ಇಡೀ ಸಮಾಜಕ್ಕೆ ದೊಡ್ಡ ತಲೆ ನೋವಾಗಿದೆ. ರಾಜಕೀಯ ಹಿನ್ನೆಲೆಯೇ ಎಲ್ಲರನ್ನು ಬೆದರಿಸುವ ಇವರ ತಂತ್ರಗಾರಿಕೆಯಾಗಿದೆ ಎಂದು ಹೇಳಿದರು.

ಆರ್‍ ಟಿಐ ಕಾರ್ಯಕರ್ತನ ವಿರುದ್ದ 7 ಎಫ್ಐಆರ್ ದಾಖಲಾಗಿವೆ. 3 ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಹ ಸಲ್ಲಿಕೆಯಾಗಿದೆ. ಒಬ್ಬ ಆರೋಪಿಯಿಂದಲೇ ಗೃಹ ಸಚಿವರು ಸನ್ಮಾನಿತಗೊಂಡಿರುವುದು ನಾಚಿಕೆಗೇಡಿತನ ಸಂಗತಿಯಾಗಿದೆ. ಅಲ್ಲದೆ ಇವರ ನೈತಿಕತೆಯನ್ನು ನಿರೂಪಿಸುತ್ತದೆ.‌ ಈಗಲಾದರೂ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ದಿವ್ಯಾ ಹಾಗರಗಿ ಮತ್ತು ಅವರ ಲೂಟಿ ಗ್ಯಾಂಗ್ ಗೆ ಕಡಿವಾಣ ಹಾಕಲು ಬಂಧಿಸಿ ಜೈಲಿಗಟ್ಟುವುದೇ ಪರಿಹಾರವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next