ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ವಿ.ಸೋಮಣ್ಣ ಮತ್ತು ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ಸಂಜೆ 6:30ರ ವೇಳೆಗೆ ಕ್ಷೇತ್ರಕ್ಕೆ ಆಗಮಿಸಿದ ಸೋಮಣ್ಣ, ಪತ್ನಿ ಶೈಲಜಾ ಕೆಲ ಕಾಲ ರಾಷ್ಟ್ರಪತಿ ಭವನಕ್ಕೆ ತೆರಳಿ ವಿಶ್ರಾಂತಿ ಪಡೆದರು. ಬಳಿಕ 7 ಗಂಟೆಯ ವೇಳೆಗೆ ತುಂತುರು ಮಳೆಯ ನಡುವೆಯೇ ದೇವಾಲಯಕ್ಕೆ ಆಗಮಿಸಿದರು
. ಈ ವೇಳೆ ಪ್ರಾಧಿಕಾರಿದ ಅಧಿಕಾರಿಗಳು ಅವರನ್ನು ಬರಮಾಡಿಕೊಂಡು ದೇವರ ದರ್ಶನಕ್ಕೆ ಕರೆದೊಯ್ದರು. ಬಳಿಕ ದೇವರ ದರ್ಶನ ಪಡೆದರು. ಈ ವೇಳೆ ಅರ್ಚಕರು ಶಾಲು ಹೊದಿಸಿ ಪುಷ್ಪ ಮಾಲಿಕೆ ನೀಡಿ ಗೌರವಿಸಿದರು. ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಮಹದೇಶ್ವರನ ರುದ್ರಾಭಿಷೇಕ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಬಳಿಕ ದೇವಾಲಯದ ಆವರಣದಲ್ಲಿನ ಕಚೇರಿಗೆ ತೆರಳಿದ ಸಚಿವರಿಗೆ ಪುದುವಟ್ಟುಗಳನ್ನು ಪ್ರಸಾದವಾಗಿ ನೀಡಲಾಯಿತು. ಬಳಿಕ ಶ್ರೀಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿದ್ದರು.
ಸೋಮವಾರ ಬೆಳಗ್ಗೆಯೂ ಪೂಜೆ: ಭಾನುವಾರ ಸಂಜೆ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಸಚಿವರು ಸೋಮವಾರ ಬೆಳ್ಳಂ ಬೆಳಗ್ಗೆಯೇ ದೇವರ ದರ್ಶನ ಪಡೆದು ಬಳಿಕ 7:30ರ ವೇಳೆಗೆ ಸಾಲೂರು ಮಠಕ್ಕೆ ತೆರಳಿ ಬೆಳಗ್ಗಿನ ಉಪಾಹಾರ ಸೇವಿಸಿದರು. ಬಳಿಕ ಹನೂರು ಕೊಳ್ಳೇಗಾಲ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ಸಾದರು.
ಮುಖ್ಯಮಂತ್ರಿ ಕರೆತಂದು ಸಭೆ ನಡೆಸುವೆ: ಈ ಪುಣ್ಯ ಕ್ಷೇತ್ರದಲ್ಲಿ ನೆಲೆಸಿರುವ ಮಹದೇಶ್ವರ ಸ್ವಾಮಿ ನಮ್ಮ ಮನೆಯ ದೇವರಾಗಿದ್ದಾನೆ. ಈ ಪುಣ್ಯಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ. ಈ ಹಿನ್ನೆಲೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆತಂದು ಇಲ್ಲಿ ಸಭೆ ನಡೆಸಿ ಇಲ್ಲಿನ ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿ.ಸೋಮಣ್ಣ ಭರವಸೆ ನೀಡಿದರು.
ಇದೇ ವೇಳೆ ಸ್ಥಳದಲ್ಲಿದ್ದ ಪ್ರಾಧಿಕಾರದ ಅಧಿಕಾರಿಗಳ ಜೊತೆ ಅನೌಪಚಾರಿಕ ಚರ್ಚೆ ನಡೆಸಿದ ಸಚಿವರು ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಕುಂದು ಕೊರತೆ ಉಂಟಾಗಬಾರದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಉಪಕಾರ್ಯದರ್ಶಿ ರಾಜಶೇಖರ ಮೂರ್ತಿ, ಪ್ರಧಾನ ಅರ್ಚಕ ಕರವೀರಸ್ವಾಮಿ, ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್, ಪ್ರಾಧಿಕಾರದ ಸಿಬ್ಬಂದಿ ಹಾಗೂ ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.