ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ತಾವು ಮಂಡಿಸಿದ ಆಯವ್ಯಯವನ್ನೇ ಮುಂದುವರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಯದ ಮಧ್ಯೆಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಜೆಟ್ ಮಂಡಿಸಲು ಸಿದ್ಧತೆ ಆರಂಭಿಸಿದ್ದಾರೆ.
ಈಗಾಗಲೇ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿರುವ ಮುಖ್ಯಮಂತ್ರಿಗಳು ಜೂ. 21ರ ಗುರುವಾರದಿಂದ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದು, ಜೂ. 30ರವರೆಗೆ ಸಭೆಗಳು ನಡೆಯಲಿವೆ. ಈಗಾಗಲೇ ಈ ಕುರಿತು ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ನಿಗದಿತ ದಿನಗಳಂದು ಸಂಬಂಧಿಸಿದ ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಜೂ. 21ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಜಲ ಸಂಪನ್ಮೂಲ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಕಂದಾಯ, ಕೌಶಲ್ಯಾಭಿವೃದ್ಧಿ, ಕಾರ್ಮಿಕ ಇಲಾಖೆ ಸಭೆ, ಜೂ. 22ರಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜೂ. 23ರಂದು ರೈತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ, ಪ್ರವಾಸೋದ್ಯಮ, ಗೃಹ, ಬೆಂಗಳೂರು ನಗರಾಭಿವೃದ್ಧಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಿಸಿದ ಸಭೆಗಳು ನಡೆಯಲಿವೆ.
ಜೂ. 26ರಂದು ವಾಣಿಜ್ಯ ಮತ್ತು ಕೈಗಾರಿಕೆ, ಐಟಿ-ಬಿಟಿ, ಸಹಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರ, ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ, ಜೂ. 27ರಂದು ಲೋಕೋಪಯೋಗಿ, ಸಾರಿಗೆ, ಇಂಧನ, ಉನ್ನತ ಶಿಕ್ಷಣ, ಮೂಲ ಸೌಕರ್ಯ, ಕೃಷಿ ಮಾರುಕಟ್ಟೆ, ಸಾರ್ವಜನಿಕ ಉದ್ದಿಮೆ, ನಗರಾಭಿವೃದ್ಧಿ, ವಸತಿ, ಜೂ. 28ರಂದು ಗಣಿ ಮತ್ತು ಭೂವಿಜ್ಞಾನ, ಕಂದಾಯ, ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಜವಳಿ, ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಮತ್ತು ಹಜ್, ಅರಣ್ಯ ಮತ್ತು ಪರಿಸರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಭೆಗಳನ್ನು ಕರೆಯಲಾಗಿದೆ.
ಜೂ. 29ರಂದು ವಾಣಿಜ್ಯ ಸಂಘ ಸಂಸ್ಥೆಗಳು, ಸಾರಿಗೆ ಸಂಘ ಸಂಸ್ಥೆಗಳು, ಅಬಕಾರಿ ಸಂಘ ಸಂಸ್ಥೆಗಳು, ಭೂ ಮಾರುಕಟ್ಟೆ ಸಂಘ ಸಂಸ್ಥೆಗಳು, ವಾಣಿಜ್ಯ ಸಂಘ ಸಂಸ್ಥೆಗಳು, ಜೂ. 30ರಂದು ವಾಣಿಜ್ಯ ತೆರಿಗೆ, ಅಬಕಾರಿ ಇಲಾಖೆ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಭೆಗಳು ನಡೆಯಲಿವೆ. ಅಲ್ಲದೆ, ಸರ್ಕಾರಿ ನೌಕರರ ಸಂಘಟನೆ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಲಿದ್ದಾರೆ.