ಬೆಂಗಳೂರು: ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ.
ರಾಜ್ಯದಲ್ಲಿ ವೀರಶೈವ- ಲಿಂಗಾಯತ ಸಮಾಜದ ಜನಾಂಗದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಂತ್ಯಂತ ಹಿಂದುಳಿದವರಿದ್ದಾರೆ. ಈ ಸಮಾಜದ ಅಭಿವೃದ್ಧಿಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಅಗತ್ಯವಿದೆ. ಹೀಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಬಿ ಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ.
ಇದನ್ನೂ ಓದಿ:ಒಬ್ಬ ದಲಿತ ಶಾಸಕನಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ? ಡಿಕೆಶಿ ಗೆ ಬಿಜೆಪಿ ಪ್ರಶ್ನೆ
ನಿಗಮ ರಚನೆಗೆ ಪಕ್ಷಾತೀತವಾಗಿ ಆಗ್ರಹ ಕೇಳಿಬಂದಿತ್ತು. ಸೋಮವಾರ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಸಿಎಂ ಬಿಎಸ್ವೈ ಅವರಿಗೆ ಪತ್ರ ಬರೆದು, ಲಿಂಗಾಯತ ಅಭಿವೃದ್ಧಿ ನಿಗಮದ ಜೊತೆಗೆ, ಲಿಂಗಾಯತ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ಕಲ್ಪಿಸಿಕೊಂಡುವಂತೆ ಮನವಿ ಮಾಡಿದ್ದರು.
ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ ಬೆನ್ನಲ್ಲೇ, ವೀರಶೈವ- ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆ ಕೂಗು ಕೇಳಿಬಂದಿತ್ತು.ವೀರಶೈವ ಸಮುದಾಯದ ಮುಖಂಡರು, ಲಿಂಗಾಯುತ ಸಮುದಾಯದ ಮುಖಂಡರು, ಸ್ವಾಮೀಜಿಗಳು ಕೂಡಾ ಸಿಎಂ ಬಿಎಸ್ ವೈ ಅವರಿಗೆ ಮನವಿ ಮಾಡಿದ್ದರು.