ತುಮಕೂರು: ಇನ್ನು ಆರು ತಿಂಗಳ ಒಳಗಾಗಿ ಮದಲೂರು ಕೆರೆ ತುಂಬಿಸಿ ನಾನೇ ಬಂದು ಉದ್ಘಾಟನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮದ್ದೂರಿನಲ್ಲಿ ನಡೆದ ಬಿಜೆಪಿಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಮೂಲಕವೂ ತಾಲೂಕಿನ 60 ಕೆರೆ ತುಂಬಿಸುವ ಕೆಲಸ ಮಾಡಿಕೊಡಲಾಗುವುದು ಎಂದರು.
ಬಗರ್ ಹುಕ್ಕುಂ ಸಾಗುವಳಿಯನ್ನು ಖಾಯಂ ಮಾಡಿಕೊಡಲಾಗುವುದು. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ 10 ಸಾವಿರ ಕೊಡುವುದನ್ನು ಮುಂದುವರೆಸಲಾವುದು. ಮಹಿಳಾ ಮತ್ತು ಸ್ತ್ರೀ ಶಕ್ತಿಯನ್ನು ಬಲವರ್ಧನೆ ಮಾಡಲಾಗುವುದು ಎಂದು ನುಡಿದರು.
ಕೆ.ಅರ್. ಪೇಟೆ ಕ್ಷೇತ್ರದಲ್ಲಿ ಗೆಲ್ಲಲ್ಲು ನೀಡಿದ್ದ ಭರವಸೆ ಈಡೇರಿಸಲಾಗಿದೆ. ಅದರಂತೆ ಶಿರಾದಲ್ಲೂ ಈಡೇರಿಸಲಾಗುವುದು. 20-30 ಸಾವಿರ ಅಂತರದಿಂದ ರಾಜೇಶ್ ಗೌಡರನ್ನು ಗೆಲ್ಲಿಸಬೇಕು. ಕರ್ನಾಟಕ ಎಲ್ಲಾ ಬಡವರಿಗೂ ಮನೆ ನೀಡಲಾಗುವುದು. ಶಿರಾ ತಾಲೂಕಿನಲ್ಲಿ ಯಾವುದೇ ಮನೆಯಿಲ್ಲದಂತಾಗಬಾರದು. ಐದು ಲಕ್ಷ ಕೊಟ್ಟು ಎಲ್ಲರಿಗೂ ಮನೆ ನಿರ್ಮಿಸಿಕೊಡಲಾಗುವುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ಬಿ.ಸದಾನಂದಗೌಡ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಎಂ. ರೇಣುಕಾಚಾರ್ಯ, ಅಭ್ಯರ್ಥಿ ಡಾ.ರಾಜೇಶ್ ಗೌಡ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗವಹಿಸಿದ್ದರು.