ಹುಬ್ಬಳ್ಳಿ: ಸುಪ್ರೀಂಕೋರ್ಟ್ ನಲ್ಲಿ ನ. 23ರಂದು ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ವಿಷಯ ವಿಚಾರಣೆಗೆ ಬರಲಿದ್ದು, ರಾಜ್ಯದ ಪರವಾಗಿ ವಾದ ಮಂಡಿಸಲು ಸಮರ್ಥ ಕಾನೂನು ತಜ್ಞರ ತಂಡ ನೇಮಕ ಮಾಡಲು ಅಡ್ವೋಕೇಟ್ ಜನರಲ್ ರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿವಿವಾದದ ವಿಷಯ ಕುರಿತು ಈಗಾಗಲೇ ಅಡ್ವೋಕೇಟ್ ಜನರಲ್ ಅವರನ್ನು ಸಂಪರ್ಕಿಸಿ, ಅಗತ್ಯ ಸಲಹೆ-ಸೂಚನೆ ನೀಡಲಾಗಿದೆ. ಆ ಕುರಿತು ಸಾಕಷ್ಟು ಅಧ್ಯಯನ ಸಹ ನಡೆಸಲಾಗಿದೆ. ವಾದ ಮಂಡಿಸಲು ನುರಿತ, ಅತ್ಯಂತ ಹಿರಿಯ ವಕೀಲರನ್ನು ನಿಯೋಜಿಸಬೇಕು ಎಂದು ನಿರ್ದೇಶಿಸಲಾಗಿದೆ. ಸರಕಾರ ಈ ಕುರಿತು ನಿರ್ಲಕ್ಷ್ಯವಹಿಸಿಲ್ಲ. ಸಮರ್ಥವಾಗಿ ವಾದ ಮಂಡಿಸಲಿದೆ ಎಂದರು.
ಪ್ರಸಕ್ತ ಸಾಲಿನ ಸಿಇಟಿ ರ‍್ಯಾಕಿಂಗ್ ಸಂಬಂಧಿಸಿ ಹೈಕೋರ್ಟ್ ಆದೇಶ ನೀಡಿದ್ದು, ಕೆಲವು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ. ಕೋರ್ಟ್ ಆದೇಶ ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಡ್ವೋಕೇಟ್ ಜನರಲ್ ರಿಗೆ ಸೂಚಿಸಲಾಗಿದೆ. ಮೇಲ್ಮನವಿ ಸಲ್ಲಿಸುವ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದರು.
ಪೊಲೀಸ್ ಸಿಬ್ಬಂದಿಗೆ ಸಂಬಂಧಿಸಿದ ರಾಘವೇಂದ್ರ ಔರಾದಕರ ವರದಿ ಅನುಷ್ಠಾನಗೊಳ್ಳುತ್ತಿದೆ. ಪೊಲೀಸ್ ಇಲಾಖೆ ಸಿಬ್ಬಂದಿಯು ಹೆಚ್ಚಿನ ಕೌಶಲ ಪಡೆಯಬೇಕೆಂದು ಕಂಪ್ಯೂಟರ್ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಎಲ್ಲ ಇಲಾಖೆಯ ಸಿಬ್ಬಂದಿಗೂ ಇದು ಕಡ್ಡಾಯವಾಗಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಜಾರಿ ಮಾಡಲಾಗಿದೆ. ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಅವಶ್ಯಕ ಎಂದರು.