ಬೆಂಗಳೂರು: ಕಾಂಗ್ರೆಸ್ ನ ಪಾದಯಾತ್ರೆಯಿಂದ ಬೆಂಗಳೂರಿಗೆ ಯಾವುದೇ ಉಪಯೋಗವಿಲ್ಲ. ಇವರ ರಾಜಕೀಯ ಇಚ್ಚಶಕ್ತಿಗಾಗಿ ಬೆಂಗಳೂರಿಗರಿಗೆ ಕಷ್ಟ ಕೊಡುತ್ತಿದ್ದಾರೆ. ಅದೂ ಒಂದಲ್ಲ, ಮೂರು- ಮೂರು ದಿನ ಬೆಂಗಳೂರಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಟ್ರಾಫಿಕ್ ಬಗ್ಗೆ ನಿಮಗೆ ಗೊತ್ತಿದೆ. ಪಾದಯಾತ್ರೆಯಿಂದ ಇನ್ನಷ್ಟು ಟ್ರಾಫಿಕ್ ಜಾಮ್ ಆಗಲಿದೆ. ಫ್ರೀಡಂ ಪಾರ್ಕ್ ಗೆ ಬಂದು ಪಾದಯಾತ್ರೆ ಮುಗಿಸಿಬಹುದಿತ್ತು. ಆದರೆ ಇವರು ರಾಜಕೀಯಕ್ಕಾಗಿ ಬೆಂಗಳೂರಲ್ಲಿ ಮೂರು ದಿನ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
ಗೃಹ ಸಚಿವರ ವಿರುದ್ಧ ಡಿಕೆಶಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಗೆ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದ ಮೇಲೆ ಎಷ್ಟು ಕೇಸ್ ಹಾಕಿದೆ? ಎಷ್ಟು ಲಾಠಿ ಚಾರ್ಚ್ ಮಾಡಿದ್ದಾರೆ? ವಿರೋಧ ಪಕ್ಷವನ್ನ ಹತ್ತಿಕ್ಕಲು ಎಷ್ಟು ಪ್ರಯತ್ನ ಮಾಡಿದ್ದಾರೆ? ಜವಾಬ್ದಾರಿಯುತವಾದ ರಾಷ್ಟ್ರೀಯ ಪಕ್ಷ ಪ್ರತಿಭಟನೆ ಮಾಡಲು ಅವಕಾಶವಿದೆ. ಅದೇ ರೀತಿ ಕಾನೂನಿನ ಅನ್ವಯ ಕೆಲಸ ಮಾಡುವುದಕ್ಕೆ ಅವಕಾಶವಿದೆ. ವಾಸ್ತವಾಂಶ ತಿಳಿಯದೆ ಮಾತಾಡೋದು ನೋಡಿದರೆ ಕಾಂಗ್ರೆಸ್ ಪಕ್ಷದ ಎಷ್ಟು ತಳಮಟ್ಟಕ್ಕೆ ಬಂದಿದೆ ಎಂದು ತಿಳಿಯುತ್ತದೆ ಎಂದರು.
ಇದನ್ನೂ ಓದಿ:ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ..; ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಡಿ.ಕೆ ಶಿವಕುಮಾರ್
ಅಧಿಕಾರಿ ಹಿಡಿಯಲು ಪಾದಯಾತ್ರೆ ಮಾಡುತ್ತಿದ್ದಾರೆ. ಎಲ್ಲ ಕಡೆ ಪಾದಯಾತ್ರೆ ಮಾಡಿ ಟ್ರಾಫಿಕ್ ಜಾಮ್ ಮಾಡುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಡಿಕೆ ಶಿವಕುಮಾರ್ ಅವರು ಹಲವು ಖಾತೆ ಹೊಂದಿದ್ದ ಅನುಭವ ರಾಜಕಾರಣಿ. ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಹೇಳಿದರು.
ಮಾಹಿತಿ ನೀಡಿದ್ದೇವೆ: ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಯ ಕುರಿತು ಮಾತನಾಡಿದ ಸಿಎಂ, ಉಕ್ರೇನ್ ನಿಂದ ಸಾಕಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇಂದು ಬೆಳಗ್ಗೆ ಏಳನೇ ವಿಮಾನ ಬರುತ್ತಿದೆ. ಮುಂಬೈನಲ್ಲಿ ಇಬ್ಬರು ಅಧಿಕಾರಿಗಳನ್ನ ನೇಮಿಸಿದೆ. ದೆಹಲಿಯಲ್ಲಿ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಇಂದು ವಿದೇಶಾಂಗ ಕಾರ್ಯದರ್ಶಿ ಜೊತೆ ಸಹ ಮಾತನಾಡಿದ್ದೇನೆ. ಎಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಅಲ್ಲಿ ಅವರ ರಕ್ಷಣೆ ಮಾಡಲು ಕೇಳಿಕೊಂಡಿದ್ದೇವೆ. ಅವರಿಗೆ ಊಟ ಉಪಚಾರ ವ್ಯವಸ್ಥೆ ಮಾಡಲು ಹೇಳಿದ್ದೇವೆ. ಅವರಿರುವ ಸ್ಥಳದ ಮಾಹಿತಿ ಕೂಡಾ ಕಳುಹಿಸಿ ಕೊಟ್ಟಿದ್ದೇವೆ ಎಂದರು.