ಬೆಂಗಳೂರು: ಬೆಳೆ ಹಾನಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ಮುಂಚೂಣಿಯ ಲ್ಲಿದ್ದು ಸಮೀಕ್ಷೆ ನಡೆಸಬೇಕು. ಸ್ಥಳ ಪರಿಶೀಲನೆ ಕೈಗೊಂಡು ಯಾವ ತಾಲೂಕು, ಗ್ರಾಮಗಳಲ್ಲಿ ನಷ್ಟ ಉಂಟಾಗಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಅಂಕಿಅಂಶ ಸಹಿತ ಮಾಹಿತಿ ನೀಡಬೇಕು. ಜತೆಗೆ ಎಸ್‌ಡಿಆರ್‌ಎಫ್ನ ಎರಡು ಹೆಚ್ಚುವರಿ ಕಂಪೆನಿಗಳನ್ನು ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆಗೆ ಗೃಹ ಕಚೇರಿ “ಕೃಷ್ಣಾ’ದಿಂದ ಶನಿವಾರ ವೀಡಿಯೋ ಸಂವಾದ ನಡೆಸಿದ ಅವರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಭೂ ಕುಸಿತದಿಂದ ಸಾವು ಸಂಭವಿಸದಂತೆ ಜನರನ್ನು ಸ್ಥಳಾಂತರಿಸಲು ಸೂಚಿಸಿದರು. ವಿಪತ್ತು ನಿರ್ವಹಣ ತಂಡದವರು ಈ ಬಗ್ಗೆ ಸಂಬಂಧಿಸಿದ ಜಿಲ್ಲೆ ಗಳಿಗೆ ಮಾಹಿತಿ ನೀಡಬೇಕು.
ನಿಯಮಿತವಾಗಿ ಪ್ರವಾಹಕ್ಕೊಳಗಾಗುವ ಪ್ರದೇಶ ಗಳನ್ನು ಈಗಾಗಲೇ ಗುರುತಿಸಲಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕೆಂದೂ ಆದೇಶಿಸಿದರು.
ರಾಜ್ಯದಲ್ಲಿ ಮಳೆಯಿಂದ 12 ಜನ ಮೃತಪಟ್ಟಿದ್ದು, 430 ಜಾನು ವಾರುಗಳು ಸಾವಿಗೀಡಾಗಿವೆ. 1,431 ಮನೆಗಳಿಗೆ ನೀರು ನುಗ್ಗಿದ್ದು, 4,242 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 7,010 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.