Advertisement

ಜನಪ್ರಿಯತೆಗೆ ಚಿತ್ತ, ಸಂಪನ್ಮೂಲ ಎತ್ತ

11:41 PM Feb 02, 2023 | Team Udayavani |

ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್‌ ಮಂಡನೆಯ ಅನಿವಾರ್ಯತೆ ಎದುರಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ “ಸಂಪನ್ಮೂಲವೇ ಸವಾಲ್‌’ ಆಗಿ ಪರಿಣಮಿಸಿದೆ. ಕೇಂದ್ರದಿಂದ ಲಭಿಸಬಹುದೆಂಬ ತೆರಿಗೆ ಪಾಲನ್ನು ಆಧರಿಸಿ “ಪರಪುಟ್ಟ ಬಜೆಟ್‌’ ರೂಪಿಸುವ ಸಾಧ್ಯತೆ ಇದೆ.

Advertisement

ಆದರೆ ಸಂಪನ್ಮೂಲ ಸಂಗ್ರಹಣೆಯ ಸಾಂಪ್ರದಾಯಿಕ ಬಾಬ್ತುಗಳ ಮೇಲೆ ಹೆಚ್ಚಿನ ಹೊರೆ ಹೇರುವಂತಿಲ್ಲ. ಕರದಾತರ ಮೇಲೆ ಅತೀ ಕರುಣೆ ಬೀರಿದರೆ ಸಂಪನ್ಮೂಲ ಸಂಗ್ರಹಣೆ ಹಗ್ಗದ ಮೇಲಿನ ನಡಿಗೆ ಆಗಲಿದೆ. ಹೀಗಾಗಿ ಅಬಕಾರಿ ಆದಾಯ ಹೆಚ್ಚಳವನ್ನೇ ನಂಬಿಕೊಳ್ಳುವಂತಾಗಿದೆ.

ಕೋವಿಡ್‌ ಹಾಗೂ ಆ ಬಳಿಕದ ದಿನಗಳಲ್ಲೂ ಅಬಕಾರಿ ಆದಾಯ ಮಾತ್ರ ಸ್ಥಿರವಾಗಿದ್ದು, ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲೇ ಶೇ.8ರ ಪ್ರಗತಿಯ ದರದಲ್ಲಿ 14 ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುದ್ರಾಂಕ, ನೋಂದಣಿ, ಸಾರಿಗೆ ಹಾಗೂ ವಾಣಿಜ್ಯ ತೆರಿಗೆ ನಿಗದಿತ ಗುರಿ ತಲುಪುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹವೂ ಉತ್ತಮವಾಗಿದ್ದು , ಮಹಾರಾಷ್ಟ್ರದ ಅನಂತರದ ಸ್ಥಾನದಲ್ಲಿದೆ. ಆದರೆ ಜಿಎಸ್‌ಟಿ ಹಂಚಿಕೆ ಸರಿಯಾಗಿ ಆಗುತ್ತಿಲ್ಲ ಎಂಬ ಮಾತಿದೆ. ಈ ಮಧ್ಯೆ, ಸದನದಲ್ಲಿ ಮಂಡನೆಯಾಗಿರುವ ಆರ್ಥಿಕ ಮಧ್ಯ ವಾರ್ಷಿಕ ವರದಿ ಪ್ರಕಾರ ಈ ಸಾಲಿನ ತೆರಿಗೆ ಸಂಗ್ರಹದಲ್ಲಿ ಶೇ.10ರಷ್ಟು ಹೆಚ್ಚಳ ಆಗಿದೆ. ಆದರೆ ಬದ್ಧತಾ ವೆಚ್ಚದ ಹೆಚ್ಚಳ, ಜಿಎಸ್‌ಟಿ ಪರಿಹಾರದ ಕಡಿತ, ಸಾಲ ಮರುಪಾವತಿಯ ಪ್ರಮಾಣವೂ ಏರಿಕೆ ಯಾಗಿರುವುದು ಚಿಂತೆಗೆ ಕಾರಣವಾಗಿದೆ.

ಬಡ್ಡಿ ಸೇರಿ 40 ಸಾವಿರ ಕೋಟಿ ರೂ. ಸಾಲ ಮರುಪಾವತಿ ಹೊಣೆಯನ್ನು ಈ ಬಜೆಟ್‌ನಲ್ಲಿ ಹೊರಬೇಕು. ಹೀಗಾಗಿ ಜನಪ್ರಿಯ ಯೋಜನೆ ಘೋಷಿಸಲು ಇನ್ನಷ್ಟು ಸಾಲದ ಮೊರೆ ಹೋಗ ಬೇಕಾದೀತೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಪಾಲು ಏರಿಕೆ:

Advertisement

ಜನಪ್ರಿಯ ಬಜೆಟ್‌ ಮಂಡಿಸುವ ಬೊಮ್ಮಾಯಿ ಅವರ ಆಲೋಚನೆಗೆ 15ನೇ ಹಣಕಾಸು ಆಯೋಗದ ವರದಿ ಸಹಾಯಕ ವಾಗಬಹುದು. ಅಂದರೆ ಈ ವರದಿ ಪ್ರಕಾರ, ರಾಜ್ಯಕ್ಕೆ ಸಿಗುವ ತೆರಿಗೆ ಪಾಲು ಏರುವ ನಿರೀಕ್ಷೆ ಇದೆ. ಹಾಗಾಗಿ ಈ ಸಾಲಿನಲ್ಲಿ ಸುಮಾರು 37 ಸಾವಿರ ಕೋಟಿಯಷ್ಟು ತೆರಿಗೆ ಪಾಲು ಲಭಿಸುವ ಸಾಧ್ಯತೆ ಇದೆ. ಮಾರ್ಚ್‌ ಅಂತ್ಯಕ್ಕೆ ಲಭಿಸುವ ಈ ದೊಡ್ಡ “ಗಂಟು’ ಬೊಮ್ಮಾಯಿ ಅವರ ಕನಸಿಗೆ ಬಲ ತುಂಬಬಹುದು. ಆದರೆ ಬಂಡವಾಳ ವೆಚ್ಚ ಇಳಿಕೆಯಾಗುವ ಸಾಧ್ಯತೆ ಇದ್ದು, ಹೊಸ ಅಭಿವೃದ್ಧಿ ಯೋಜನೆಗಳಿಗೆ ಸರಕಾರ ಮೀಸಲಿ ಡುವ ಹಣ ಕಡಿಮೆಯಾಗಬಹುದು. ಈ ಪ್ರಮಾಣ ಸುಮಾರು 26,226 ಕೋಟಿ ರೂ. ನಷ್ಟು ಕುಗ್ಗಬಹುದು ಎನ್ನಲಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥನೆ :ಕೇಂದ್ರ ಬಜೆಟ್‌ನಲ್ಲಿ ಕೆಲ ಯೋಜನೆಗಳಿಗೆ ಅನುದಾನ ಕಡಿತ ಮಾಡಿರುವುದು ಸೇರಿದಂತೆ ಸಂಪನ್ಮೂಲ ಕೊರತೆ ಸಂಗತಿಗೆ ಸಂಬಂಧಿಸಿ ಮಾತನಾ­ಡಿರುವ ಸಿಎಂ ಬೊಮ್ಮಾಯಿ, ನರೇಗಾದಲ್ಲಿ ದೊಡ್ಡ ಮೊತ್ತ ಕಡಿಮೆಯಾಗಿಲ್ಲ. ಹಲವು ಯೋಜನೆಗಳನ್ನು ನರೇಗಾದೊಂದಿಗೆ ಸೇರಿಸಿರುವುದರಿಂದ ಗ್ರಾಮೀಣ ಆಸ್ತಿ ಸೃಜನೆಗೆ ತೊಂದರೆಯಾಗದು ಎಂದರು. ಮಧ್ಯಾಹ್ನದ ಬಿಸಿ ಊಟ ಸೇರಿದಂತೆ ಎಲ್ಲ ಯೋಜನೆಗಳಿಗೆ ನಿಗದಿತ ಅವಧಿ ಇರುತ್ತದೆ. ಉದಾಹರಣೆಗೆ ಹಿಂದೆ ಪ್ರಾಥಮಿಕ ಶಿಕ್ಷಣದ ಉತ್ತೇಜನಕ್ಕಾಗಿ ಸರ್ವ ಶಿಕ್ಷಾ ಅಭಿಯಾನ ಇತ್ತು. ಈಗ ಮಾಧ್ಯಮಿಕ ಶಿಕ್ಷಣ ಅಭಿಯಾನ ಚಾಲ್ತಿಯಲ್ಲಿದೆ. ಯೋಜನೆ ಹಾಗೂ ಸಂಪನ್ಮೂಲ ಸಂಗ್ರಹಣೆ ಮಾರ್ಗ ಕಾಲಕಾಲಕ್ಕೆ ಬದಲಾಯಿಸಬೇಕಾದೀತು. ಈ ಬಾರಿಯೂ ಜನಪರ ಬಜೆಟ್‌ ಮಂಡಿಸುವೆ ಎಂದರು.

ಕರ್ನಾಟಕದ ಪಾಲು ಲಭ್ಯ :

ಪ್ರಧಾನಿ ಮೋದಿ ಅವರು ಭಾರತವನ್ನು ಅತ್ಯಂತ ವೇಗವಾಗಿ ಪ್ರಗತಿಯತ್ತ ಒಯ್ಯುವ ಗುರಿ ಹೊಂದಿದ್ದು,. ಕೇಂದ್ರ ಬಜೆಟ್‌ನಲ್ಲಿನ ಎಲ್ಲ ಯೋಜನೆಗಳಿಂದಲೂ ಕರ್ನಾಟಕಕ್ಕೆ ಪಾಲು ಲಭಿಸಲಿದೆ. ಕೇಂದ್ರ, ರಾಜ್ಯ ಹಾಗೂ ಹಣಕಾಸು ವಿಚಾರಗಳ ಬಗ್ಗೆ ಸ್ವಲ್ಪವಾದರೂ ತಿಳಿದುಕೊಂಡ ವರು, ಬಜೆಟ್‌ನಲ್ಲಿ ರಾಜ್ಯಕ್ಕೆ ಏನು ಕೊಟ್ಟಿದೆ ಎಂದು ಪ್ರಶ್ನಿಸಲಾರರು ಎಂದರು ಬೊಮ್ಮಾಯಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next