ಮಂಡ್ಯ/ಮಡಿಕೇರಿ: ಇತಿಹಾಸದಲ್ಲೇ ಮೊದಲ ಬಾರಿಗೆ ಕೃಷ್ಣರಾಜಸಾಗರ ಜಲಾಶಯ ಅತಿ ಶೀಘ್ರವಾಗಿ ಭರ್ತಿಯಾದ ದಾಖಲೆ ಬರೆದಿದ್ದು, ಮೈದುಂಬಿದ ಕಾವೇರಿಗೆ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಾಗಿನ ಅರ್ಪಿಸಲಿದ್ದಾರೆ.
ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿ ಕಾಪ್ಟರ್ ಮೂಲಕ ಹೊರಟು, 11.20ಕ್ಕೆ ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್‌ಗೆ ಬಂದಿಳಿಯುವರು. ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಳಗ್ಗೆ 11.45ಕ್ಕೆ ಚಾಮುಂಡಿ ಬೆಟ್ಟಕ್ಕೆ ತೆರಳುವರು. ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ 12.45ಕ್ಕೆ ಕೆಆರ್‌ಎಸ್ ಹೆಲಿಪ್ಯಾಡ್ ತಲುಪುವರು. ಕೆಆರ್‌ಎಸ್‌ನಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಿದ್ದಾರೆ. ಬಳಿಕ, 1.45ಕ್ಕೆ ಕೆಆರ್‌ಎಸ್ ಹೆಲಿಪ್ಯಾಡ್‌ನಿಂದ ಕೊಡಗಿಗೆ ತೆರಳಲಿದ್ದಾರೆ.
ಮಧ್ಯಾಹ್ನ 2.15ಕ್ಕೆ ಕೊಡಗಿನ ಕೂಡಿಗೆ ಸೈನಿಕ ಶಾಲೆಯ ಹೆಲಿಪ್ಯಾಡ್‌ಗೆ ಆಗಮಿಸಲಿರುವ ಸಿಎಂ, ಜಿಲ್ಲೆಯ ಶಾಸಕರು, ಸಂಸದರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ನಂತರ, ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ಅಳಲು ಆಲಿಸಲಿದ್ದಾರೆ.
ದಾಖಲೆ ಬರೆದ ಕೆಆರ್‌ಎಸ್: ಜೂನ್ ಹಾಗೂ ಜುಲೈ ತಿಂಗಳಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಈ ಬಾರಿ ಕೆಆರ್‌ಎಸ್ ಭರ್ತಿಯಾಗುವ ಬಗ್ಗೆ ಅನುಮಾನ ಹುಟ್ಟಿತ್ತು. ಆ.5ರಂದು ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 83.10 ಅಡಿಗೆ ಕುಸಿದಿತ್ತು. ರೈತರು ದಿಕ್ಕು ತೋಚದೆ ಕಂಗಾಲಾಗಿದ್ದ ಸಮಯದಲ್ಲೇ ವರುಣನ ಆಗಮನವಾಯಿತು.
ಎಲ್ಲೆಡೆ ಮಳೆಯ ಆರ್ಭಟ ಹೆಚ್ಚಾಯಿತು. ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿ ನದಿಗಳು ಉಕ್ಕಿ ಹರಿಯಲಾರಂಭಿಸಿದವು. ನೋಡ, ನೋಡುತ್ತಿದ್ದಂತೆ ಆ.16ರ ಬೆಳಗ್ಗೆ 6 ಗಂಟೆಗೆ, ಕೇವಲ ಹನ್ನೊಂದು ದಿನಗಳೊಳಗೆ ಕೆಆರ್‌ಎಸ್ ಭರ್ತಿಯ ಹಂತ ತಲುಪಿತು.