ಕಾರವಾರ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಬಸವರಾಜ್ ಬೊಮ್ಮಾಯಿ ಅವರು ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ಹಣ ಘೋಷಣೆ ಮಾಡಿದರು.
ಇಲ್ಲಿಯ ಅಂಕೋಲಾದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ರಾಜ್ಯ ಸರ್ಕಾರದಿಂದ 200 ಕೋಟಿ ರೂ.ಬಿಡುಗಡೆ ಮಾಡಿರುವುದಾಗಿ ಘೋಷಿಸಿದ ಬೊಮ್ಮಾಯಿ, ಮಳೆಯಿಂದಾಗಿ ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ , ಭಾಗಶಃ 3 ಲಕ್ಷ, ಸ್ವಲ್ಪ ಹಾನಿಯಾಗಿದ್ದರೆ 50 ಸಾವಿರ ಕೊಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಬಿದ್ದ ಮನೆಗಳಿಗೆ ತಕ್ಷಣ ಪರಿಹಾರ ಕೊಡಿ, ಅರಣ್ಯ ಜಾಗದಲ್ಲಿ ಮನೆ ಇದ್ದು, ಅದು ಬಿದ್ದಿದ್ದರೂ ಕೊಡಿ, ಮನೆ ಕಟ್ಟಿಕೊಂಡವರಿಗೆ ಕಳೆದ ವರ್ಷ 95 ಸಾವಿರ ಕೊಟ್ಟಿದ್ದವರಿಗೆ ಇದೀಗ ಉಳಿದ ಹಣ ಕೊಡಿ. ಕಳಚೆ ಗ್ರಾಮ ಸಂಪೂರ್ಣ ಸ್ಥಳಾಂತರಕ್ಕೆ ಯೋಜನೆ ರೂಪಿಸಿ. ೧೫ ಎಕರೆ ಜಾಗ ಹುಡುಕಿ ಎಂದು ಜಿಲ್ಲಾಧಿಕಾರಿಗೆ ಆದೇಶಿಸಿದರು.
ಇನ್ನು ಸುಫಾ ಕದ್ರಾ ಕೆಪಿಸಿ ಹಾಗೂ ಜಿಲ್ಲಾಡಳಿತ ಸಮನ್ವಯತೆಯಿಂದ ಹಂತ ಹಂತವಾಗಿ ನೀರು ಬಿಡಿ ಎಂದು ಸೂಚಿಸಿದ ಮುಖ್ಯಮಂತ್ರಿಗಳು, ಅರಬೈಲ್ ಘಾಟ್ ರಸ್ತೆ , ಕಳಚೆ ರಸ್ತೆ ಘಟ್ಟ ಕುಸಿದ ರಿಪೇರಿಗೆ ೧೦ ಕೋಟಿ ವೆಚ್ಚದಲ್ಲಿ ಸುಧಾರಿಸಿ. 6000 ಮೀನುಗಾರರಿಗೆ ವ್ಯಾಕ್ಸಿನೇಷನ್ ಕ್ಯಾಂಪ್ ಮಾಡಿ. ರೈತರ ಬೆಳೆ ಹಾನಿ ಪರಿಹಾರಕ್ಕೆ ಕ್ರಮ ಕೈಕೊಳ್ಳತ್ತೇನೆ. ನೆರೆ ಪರಿಹಾರ ತಕ್ಷಣ ನೀಡಿ ಎಂದು ಜಿಲ್ಲಾಧಿಕಾರಿ ಮುಗಿಲನ್ ಗೆ ಸಿಎಂ ಬೊಮ್ಮಾಯಿ ಸೂಚಿಸಿದರು.
ಈ ವೇಳೆ ಮಾಜಿ ಸಚಿವ ಹಾಗೂ ಶಾಸಕ ಶಿವರಾಂ ಹೆಬ್ಬಾರ್, ಸುನೀಲ್ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ ಇದ್ದರು.