Advertisement

ದಿವ್ಯಾಂಗರ ಅಭಿವೃದ್ಧಿಗೆ ವಿಶೇಷ ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

09:25 PM Aug 30, 2021 | Team Udayavani |

ಬೆಂಗಳೂರು: ದಿವ್ಯಾಂಗರಿಗೆ ಅನುಕಂಪವಲ್ಲ; ಅವಕಾಶ ನೀಡಬೇಕು. ಮುಂದಿನ ದಿನಗಳಲ್ಲಿ ದಿವ್ಯಾಂಗರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Advertisement

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸೆನ್ಸ್ ಎಸೆನ್ಸ್ ಸಂಸ್ಥೆಯು ವಿಆರ್ ಎಲ್ ಸಂಸ್ಥೆಯ ಸಹಯೋಗದಲ್ಲಿ ಪ್ರಕಟಿಸಿರುವ ಮ್ಯಾಜಿಕ್ ಡಾಟ್ಸ್ ಎಂಬ ಬ್ರೈಲ್ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಮುಖ್ಯಮಂತ್ರಿಯಾಗಿ ಮೊದಲ ಸಂಪುಟ ಸಭೆಯಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ ಹೆಚ್ಚಿಸಲು ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ ದಿವ್ಯಾಂಗರಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ದಿವ್ಯಾಂಗರು ದೇವರ ಮಕ್ಕಳು. ನಮ್ಮ ಒಬ್ಬ ಸಂಪೂರ್ಣ ಸಶಕ್ತ ಮನುಷ್ಯನಿಗೆ ತನ್ನ ದೇಹದ ಅಂಗಾಂಗಳ ಮಹತ್ವದ ಇರುವುದಿಲ್ಲ. ದೇವರ ಮಕ್ಕಳು ಎದುರಾದಾಗ ಅವರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು ಎಂದು ಪರೀಕ್ಷೆ ಮಾಡುತ್ತಾನೆ.ಇವರ ಸೇವೆ ಮಾಡುವ ಮುಖಾಂತರ ಬದುಕಿನ ಬ್ಯಾಲೆನ್ಸ್ ಶೀಟ್ ಅನ್ನು ಸರಿ ಮಾಡಿಕೊಳ್ಳಿ ಎಂದು ಅವಕಾಶ ಕೊಡುತ್ತಾನೆ ಎಂದು ಅವರು ನುಡಿದರು.

ಅಂಗಾಂಗದ ಕೊರತೆ ಬಿಟ್ಟರೆ, ಎಲ್ಲರನ್ನೂ ಮೀರಿಸುವ ಬುದ್ಧಿ ಶಕ್ತಿ ಅವರಿಗಿದೆ. ಸಾಮಾನ್ಯ ಮನುಷ್ಯರು ತಮ್ಮ ಮೆದುಳನ್ನು ಶೇ. 20ಕ್ಕಿಂತ ಹೆಚ್ಚು ಬಳಸುವುದಿಲ್ಲ. ದಿವ್ಯಾಂಗರ ಬುದ್ಧಿಮತ್ತೆ ನಮ್ಮ ಊಹೆಗೂ ಮೀರಿದ್ದು. ಅದಕ್ಕೆ ಅವರಿಗೆ ಸಂಗೀತ, ಕಲೆ ಹೀಗೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

Advertisement

ಶ್ರೇಷ್ಠ ಸಾಧಕ ವಿಜಯ ಸಂಕೇಶ್ವರ ಅವರ ಪುತ್ರ ಆನಂದ್ ಸಂಕೇಶ್ವರ ಅವರು ಈ ಪತ್ರಿಕೆಯ ಪ್ರಕಟಣೆಗೆ ಸಹಕಾರ ನೀಡಿರುವುದು, ಅವರ ಸಂವೇದನಾ ಶೀಲತೆಗೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೆನ್ಸ್ ಅಂಡ್ ಎಸೆನ್ಸ್ ಸಂಸ್ಥೆಯ ಸಂಸ್ಥಾಪಕರಾದ ಯಶ್ವಿ ಭಂಡಾರಿ ಹಾಗೂ ರುಷಾಲಿ ದೋಷಿ ಅವರು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕಾಲಹರಣ ಮಾಡದೆ, ಬ್ರೈಲ್ ಲಿಪಿಯಲ್ಲಿ ಸಮಾಜದ ಆಗುಹೋಗುಗಳನ್ನು ತಿಳಿಸುವ ಸಲುವಾಗಿ ಪತ್ರಿಕೆಯನ್ನು ಹೊರತರುವ ಮೂಲಕ ಮಾನವೀಯ ಕಳಕಳಿಯನ್ನು ತೋರಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಈ ಪತ್ರಿಕೆಯನ್ನು ಮಾನ್ಯ ಪ್ರಧಾನ ಮಂತ್ರಿಯವರ ಗಮನಕ್ಕೂ ತರುವುದಾಗಿ ತಿಳಿಸಿದರು.

ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ದೇಶದ ದಿವ್ಯಾಂಗ ಕ್ರೀಡಾಪಟುಗಳ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದಿವ್ಯಾಂಗ ಪ್ರತಿಭೆ ಬಸವರಾಜ ಉಮ್ರಾಣಿ ಅವರು ಗಣಿತದಲ್ಲಿನ ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿ, ಪ್ರಶಂಸೆಗೆ ಪಾತ್ರರಾದರು. ಉಮ್ರಾಣಿ ಅವರನ್ನು ಮುಖ್ಯಮಂತ್ರಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಯಶ್ವಿ ಭಂಡಾರಿ ಹಾಗೂ ರುಷಾಲಿ ದೋಷಿ, ವಿಆರ್ ಎಲ್ ಸಮೂಹ ಸಂಸ್ಥೆಯ ಆನಂದ್ ಸಂಕೇಶ್ವರ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next