Advertisement

ಬಂಟ್ವಾಳ: ಪಂಜಿಕಲ್ಲಿನ ಗುಡ್ಡ ಕುಸಿತ ಪ್ರಕರಣ : ಮೃತರ ಕುಟುಂಬಕ್ಕೆ ಪರಿಹಾರ ಹಸ್ತಾಂತರ

01:23 AM Jul 13, 2022 | Team Udayavani |

ಬಂಟ್ವಾಳ : ಪಂಜಿಕಲ್ಲಿನ ಮುಕ್ಕುಡದಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ಮಣ್ಣಿನಡಿ ಸಿಲುಕಿ ಮೃತಪಟ್ಟ ಕೇರಳ ಮೂಲದ ಮೂವರು ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕರ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಬಂಟ್ವಾಳದ ನಿರೀಕ್ಷಣಾ ಮಂದಿರದಲ್ಲಿ ತಲಾ 5 ಲಕ್ಷ ರೂ.ಗಳ ಚೆಕ್‌ ವಿತರಿಸಿದರು.

Advertisement

ಬಳಿಕ ಸಿಎಂ ಮಾತನಾಡಿ, ಈ ಬಾರಿ ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳ ಚಿತ್ರಣವನ್ನು ವಿಡಿಯೋ ಮೂಲಕ ವೀಕ್ಷಿಸಿದರು. ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ತಾಲೂಕಿನ ಪರಿಸ್ಥಿತಿಯನ್ನು ಸಿಎಂ ಅವರಿಗೆ ವಿವರಿಸಿದರು. ಬಳಿಕ ಕೆಲಹೊತ್ತು ಸಚಿವರು-ಶಾಸಕರ ಜತೆ ಗೌಪ್ಯ ಮಾತುಕತೆ ನಡೆಸಿದರು.

ಮೃತರ ಕುಟುಂಬದವರ ಆಗಮನ
ಘಟನೆಯಲ್ಲಿ ಮೃತಪಟ್ಟ ಬಿಜು ಪಾಲಕ್ಕಾಡ್‌, ಸಂತೋಷ್‌ ಅಲಪುರ, ಬಾಬು ಕೊಟ್ಟಾಯಂ ಅವರ ಕುಟುಂಬಸ್ಥರು ಆಗಮಿಸಿ ಪರಿಹಾರದ ಚೆಕ್‌ ಪಡೆದರು. ಅವರಿಗೆ ಮಲಯಾಳಂ ಹೊರತುಪಡಿಸಿದರೆ ಉಳಿದಂತೆ ಯಾವುದೇ ಭಾಷೆ ಬರುತ್ತಿರಲಿಲ್ಲ.

ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು, ಕಂದಾಯ ಸಚಿವ ಆರ್‌.ಅಶೋಕ್‌, ಲೋಕೋ ಪಯೋಗಿ ಸಚಿವ ಸಿ.ಸಿ. ಪಾಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್‌ಕುಮಾರ್‌, ಮೀನುಗಾರಿಕಾ ಸಚಿವ ಎಸ್‌.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ನಿಗಮಗಳ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್‌, ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್‌ ಕುಮಾರ್‌ ರೈ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ, ದ.ಕ.ಜಿ.ಪಂ. ಸಿಇಒ ಡಾ| ಕುಮಾರ್‌, ಮಂಗಳೂರು ಸಹಾಯಕ ಕಮೀಷನರ್‌ ಮದನ್‌ಮೋಹನ್‌ ಸಿ, ಬಂಟ್ವಾಳ ತಹಶೀಲ್ದಾರ್‌ ಡಾ| ಸ್ಮಿತಾ ರಾಮು, ತಾ.ಪಂ.ಇಒ ರಾಜಣ್ಣ, ಪುರಸಭಾ ಮುಖ್ಯಾಧಿಕಾರಿ ಎಂ.ಆರ್‌.ಸ್ವಾಮಿ, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಬುಡಾ ಅಧ್ಯಕ್ಷ ಬಿ.ದೇವದಾಸ್‌ ಶೆಟ್ಟಿ, ನಗರ ನೀರು ಸರಬರಾಜು ಮಂಡಳಿಯ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್‌ ಕರ್ಕಳ ಮೊದಲಾದವರಿದ್ದರು.

ಮಸಾಲೆ ದೋಸೆ ಸವಿದ ಸಿಎಂ
ಸಂಜೆ 6.15ಕ್ಕೆ ಆಗಮಿಸಿದ ಸಿಎಂ ಅವರು ಅರ್ಧ ತಾಸು ಕಾಲ ಇದ್ದರು. ಬಂಟ್ವಾಳ ಆರ್ಯದುರ್ಗಾ ಕ್ಯಾಟರಿಂಗ್‌ನವರ ಮಸಾಲೆ ದೋಸೆ, ಅವಲಕ್ಕಿ, ಹಲ್ವಾ, ಗೋಳಿಬಜೆ, ಶೀರಾ, ಚಟ್ನಿ ಹಾಗೂ ಗೋಡಂಬಿ ಸವಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next