ತುಮಕೂರು: ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.
ಸಮುದಾಯದ ಆರಾಧ್ಯ ದೈವ ಅಗ್ನಿ ಬನ್ನಿಗರಾಯ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ನಗರದ ಅಮಾನಿಕೆರೆಯ ಗಾಜಿನಮನೆಯಲ್ಲಿ ಶುಕ್ರವಾರ ನಡೆದ ತಿಗಳ ಕ್ಷತ್ರಿಯ ಸಮಾಜದ ಜಾಗೃತಿ ಸಮಾವೇಶ ಹಾಗೂ ಗುರುವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷವೂ ಸರ್ಕಾರದಿಂದಲೇ ಅಗ್ನಿಬನ್ನಿಗರಾಯ ಜಯಂತಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಗ್ನಿಬನ್ನಿರಾಯ, ತಿಗಳರ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹೆಚ್ಚಿನ ಅಧ್ಯಯನ ಕೈಗೊಳ್ಳಲು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಕೇಂದ್ರ ತೆರೆಯಲಾಗುವುದು. ತಿಗಳ ಸಮುದಾಯದ ಭವನಗಳಿಗೆ 5 ಕೋಟಿ ರೂ. ನೀಡಿದ್ದೇನೆ. ಸಮುದಾಯದ ಹಾಸ್ಟೆಲ್‌ಗಳ ನಿರ್ಮಾಣಕ್ಕೂ 4.45 ಕೋಟಿ ರೂ. ನೀಡಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಜತ ಕತ್ತಿ ನೀಡಿ ಗೌರವಿಸಲಾಯಿತು. ತಿಗಳ ಸಮಾಜದ ಶ್ರೀ ಮಹಾಲಕ್ಷಿ¾à ಮಹಾಸಂಸ್ಥಾನದ ಶ್ರೀ ಜ್ಞಾನನಂದಪುರಿ ಸ್ವಾಮಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಲೇಖಕ ಸೂರ್ಯಪ್ರಕಾಶ್ ಬರೆದಿರುವ ಅಗ್ನಿಬನ್ನಿರಾಯ ಸ್ವಾಮಿಯ ಕುರಿತ ಪುಸ್ತಕವನ್ನು ಲೋಕಾರ್ಪಣೆ ಮತ್ತು ಧ್ವನಿ ಸುರಳಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗ ಮಹಾಸ್ವಾಮಿಗಳು ಸೇರಿ ಮತ್ತಿತರರಿದ್ದರು.