Advertisement

ಭಾರತೀಯ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿ ಬಜೆಟ್: ಬಿ ಎಸ್ ಯಡಿಯೂರಪ್ಪ

04:29 PM Feb 01, 2021 | Team Udayavani |

ಬೆಂಗಳೂರು: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2021-22 ರ ಕೇಂದ್ರ ಬಜೆಟ್ ಬಸವಳಿದಿರುವ ಭಾರತೀಯ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿಯಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶ್ಲಾಘಿಸಿದ್ದಾರೆ.

Advertisement

ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ 19 ಸಾಂಕ್ರಾಮಿಕದ ಪರಿಣಾಮವಾಗಿ ಸ್ಥಗಿತಗೊಂಡ ಅರ್ಥವ್ಯವಸ್ಥೆ ಮತ್ತೆ ಪುಟಿದೇಳಲು ಈ ಬಜೆಟ್ ವೇಗವರ್ಧಕವಾಗಿ ಕೆಲಸ ಮಾಡಲಿದೆ ಎನ್ನುವುದು ನನ್ನ ನಂಬಿಕೆ. ಸಾಂಕ್ರಾಮಿಕದ ಸಂಕಷ್ಟದ ನಡುವೆ ಇದಕ್ಕಿಂತ ಉತ್ತಮ ಬಜೆಟ್ ನಿರೀಕ್ಷಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.

4ರೋಗ ನಿಯಂತ್ರಣದ ಜೊತೆಗೆ ಅರ್ಥ ವ್ಯವಸ್ಥೆಯ ಪುನರುಜ್ಜೀವನಕ್ಕೆ  ಅಗತ್ಯವಾದ ಕಾರ್ಯತಂತ್ರವನ್ನು ಪ್ರಕಟಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಿವಾರಣೆಗೆ ಕೈಗೊಂಡಿರುವ ಲಸಿಕೆ ಅಭಿಯಾನಕ್ಕೆ 35,000 ಕೋಟಿ ರೂ. ಒದಗಿಸಿದ್ದು , ಇನ್ನೂ ಹೆಚ್ಚಿನ ಹಣದ ಅಗತ್ಯ ಬಿದ್ದಲ್ಲಿ ಒದಗಿಸುವುದಾಗಿ ತಿಳಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.

ಇದನ್ನೂ ಓದಿ:ಇತಿಹಾಸದಲ್ಲಿ ಇಂತಹ ನಿರುತ್ಸಾಹಿ ಬಜೆಟ್ ಇನ್ನೊಂದಿಲ್ಲ: ಡಿ ಕೆ ಶಿವಕುಮಾರ್ ಟೀಕೆ

ಕೃಷಿ ಕ್ಷೇತ್ರದ ಬಲವರ್ಧನೆ, ಅನ್ನದಾತ ರೈತರ ಅಭಿವೃದ್ಧಿಗೆ ಪ್ರಾಮುಖ್ಯತೆ, ಕೌಶಲ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಈ ಬಜೆಟ್‍ನಲ್ಲಿ ವಿಶೇಷ ಗಮನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2022 ರೊಳಗೆ ರೈತರ ಆದಾಯ ದ್ವಿಗುಣಗೊಳಿಸಲು ಈ ಬಜೆಟ್ ಭೂಮಿಕೆ ಒದಗಿಸಿದೆ. ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ 16.50 ಲಕ್ಷ ಕೋಟಿ ರೂ. ನಿಗದಿಮಾಡಲಾಗಿದೆ. ಎಪಿಎಂಸಿ ಹಾಗೂ ಎಂಎಸ್‍ಪಿ ವ್ಯವಸ್ಥೆ ಮುಂದುವರಿಕೆ ಮತ್ತು ಬಲವರ್ಧನೆಗೆ ಒತ್ತು ನೀಡಲಾಗಿದೆ. ಕೃಷಿ ಮಾರುಕಟ್ಟೆಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ನಿಧಿ, ಸೂಕ್ಷ್ಮ ನೀರಾವರಿ ಯೋಜನೆಯ ಅನುದಾನವನ್ನು 2 ಪಟ್ಟು ಮಾಡಿದ್ದು ಮತ್ತು 22 ಬೆಳೆಗಳಿಗೆ ಮೌಲ್ಯವರ್ಧನೆ ಯೋಜನೆ ಘೋಷಿಸಿದ್ದು, ರೈತರಿಗೆ ಸಾಕಷ್ಟು ನೆರವಾಗಲಿದೆ ಎಂದು ಅವರು ಹೇಳಿದರು.

Advertisement

ಇದನ್ನೂ ಓದಿ: “ಆತ್ಮ ಬರ್ಬಾದ್” ಬಜೆಟ್ ಘೋಷಿಸಿದ್ದಾರೆ ನಿರ್ಮಲಾ : ಸಿದ್ದರಾಮಯ್ಯ

ಬೆಂಗಳೂರು ಮೆಟ್ರೋ ಯೋಜನೆಗೆ 14,778 ಕೋಟಿ ರೂ. ಪ್ರಕಟಿಸಲಾಗಿದೆ. ಇದರಿಂದ 58 ಕಿ.ಮೀ. ಹೊಸ ಮಾರ್ಗ ನಿರ್ಮಿಸಲು ಸಾಧ್ಯ. ಇದು ಕರ್ನಾಟಕಕ್ಕೆ ನಮ್ಮವರೇ ಆದ ಅರ್ಥ ಸಚಿವರು ನೀಡಿರುವ ಕೊಡುಗೆಯಾಗಿದೆ ಎಂದು ಬಿಎಸ್ ವೈ ಹೇಳಿದ್ದಾರೆ.

ರಾಷ್ಟ್ರದ ರಸ್ತೆ ಸಂಪರ್ಕ ಜಾಲ ಸುಧಾರಿಸಲು ಭಾರತ ಮಾಲಾ ಯೋಜನೆಯಲ್ಲಿ 3.30 ಲಕ್ಷ ಕೋಟಿ ರೂ. ಹಾಗೂ ವಿದ್ಯುತ್ ವಲಯಕ್ಕೆ 3 ಲಕ್ಷ ಕೋಟಿ ರೂ. ಒದಗಿಸಿರುವುದು ಪ್ರಶಂಸನೀಯ. ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆಗೆ 18 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಡಿತಗೊಳಿಸಲು ಸಹಕಾರಿಯಾಗಿದೆ ಎಂದಿದ್ದಾರೆ.

ಪ್ರಧಾನಿಯವರ ಕನಸಿನ ಆತ್ಮನಿರ್ಭರ ಭಾರತ ನನಸಾಗಿಸುವ ದಿಸೆಯಲ್ಲಿ 13 ವಲಯಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿರುವುದು ಮೆಚ್ಚುವಂತಹದ್ದು. ಸ್ವಾವಲಂಬಿ ಭಾರತ ನಿರ್ಮಿಸುವ ದಿಸೆಯಲ್ಲಿ ಆತ್ಮನಿರ್ಭರ ಭಾರತ ಯೋಜನೆ ಒತ್ತಾಸೆಯಾಗಿದೆ ಎಂದು ಬಿಎಸ್ ವೈ ಹೇಳಿದರು.

ಇದನ್ನೂ ಓದಿ: 2021 Budget: ಇದು ರೈತ ಪರ ಹಾಗೂ ಗ್ರಾಮೀಣ ಭಾರತದ ಬಜೆಟ್: ಪ್ರಧಾನಿ ನರೇಂದ್ರ ಮೋದಿ

ನಗರ ಪ್ರದೇಶಗಳ ಕುಡಿಯುವ ನೀರು ಸೌಲಭ್ಯಕ್ಕೆ 87 ಸಾವಿರ ಕೋಟಿ ರೂ. ವೆಚ್ಚದ ನಗರ ಜಲ ಜೀವನ ಮಿಷನ್, ಕೌಶಲ್ಯಾಭಿವೃದ್ಧಿಗೆ 3 ಸಾವಿರ ಕೋಟಿ ರೂ, ಸಂಶೋಧನಾ ಕ್ಷೇತ್ರಕ್ಕೆ 5 ವರ್ಷಗಳಲ್ಲಿ 50 ಸಾವಿರ ರೂ. ವೆಚ್ಚ, ಶಿಕ್ಷಣ ಕ್ಷೇತ್ರದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಮೊತ್ತ 32 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಳ ಇತ್ಯಾದಿ ಯೋಜನೆಗಳು ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಬೆಳವಣಿಗೆಗೆ ನೀಡಿರುವ ಆದ್ಯತೆಯ ದ್ಯೋತಕಗಳಾಗಿವೆ ಎಂದರು.

ಅಪೌಷ್ಠಿಕತೆ ವಿರುದ್ಧ ಹೋರಾಡಲು ಮಿಷನ್ ಪೋಷಣ್-2.0 ಯೋಜನೆ ರೂಪಿಸಿರುವುದು ಸಕಾಲಿಕವಾಗಿದೆ. 75 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಿಂದ ವಿನಾಯಿತಿ ನೀಡಿರುವುದು ಶ್ಲಾಘನೀಯ. ಒಟ್ಟಿನಲ್ಲಿ 2021-22 ನೇ ಸಾಲಿನ ಕೇಂದ್ರ ಬಜೆಟ್ ಅರ್ಥ ವ್ಯವಸ್ಥೆಯ ಪುನಶ್ಚೇತನದೊಂದಿಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಸಾಮಥ್ರ್ಯ ಪ್ರದರ್ಶಿಸಿದೆ. ಇದನ್ನು ನಾನು ಮನ:ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next