Advertisement
ಸುದ್ದಿಗಾರರ ಜತೆ ಮಾತನಾಡಿ, ಒಳ್ಳೆಯ ಸಂದರ್ಭದಲ್ಲಿ ನಾವೆಲ್ಲ ಸಿದ್ದರಾಮಯ್ಯ ಜತೆ ಇದ್ದೇವೆ. ಈಗ ಅವರಿಗೆ ಕೆಟ್ಟ ಸಂದರ್ಭ ಬಂದಿದೆ. ಈಗಲೂ ಜತೆಗಿರುತ್ತೇವೆ. ಮುಖ್ಯಮಂತ್ರಿ ಬದಲಾವಣೆ ಚರ್ಚೆಗಿದು ಸೂಕ್ತ ಕಾಲ ಅಲ್ಲ. ಬೇರೆಯವರಿಗೆ ನೋವು ಕೊಟ್ಟು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ನಾನು ಬಯಸುವುದಿಲ್ಲ; ಹಾಗೆಂದು ಡಿ.ಕೆ. ಶಿವಕುಮಾರ್ ಸಿಎಂ ಆಗುವವರೆಗೂ ನಾನು ಅವರು ಸಿಎಂ ಆಗಲೇಬೇಕು ಎನ್ನುತ್ತೇನೆ ಎಂದರು.
ಈಗ ಪಕ್ಷದ ಎಲ್ಲ ಶಾಸಕರು, ಪಕ್ಷದ ಹೈಕಮಾಂಡ್ ಎಲ್ಲರೂ ಸಿದ್ದರಾಮಯ್ಯರಿಗೆ ನೈತಿಕ ಬೆಂಬಲ ನೀಡುತ್ತೇವೆ. ಮುಖ್ಯಮಂತ್ರಿಯವರ ಮೇಲೆ ಆರೋಪ ಕೇಳಿಬಂದಿದೆ ಅಷ್ಟೇ. ಅವರು ಅಪರಾಧಿಯಲ್ಲ. ಅವರ ಜತೆಗೆ ನಾವೆಲ್ಲ ನಿಲ್ಲುತ್ತೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ವಜಾಗೊಳಿಸಿದ ವಿಚಾರವಾಗಿ ನಾನು ಏನೂ ಮಾತನಾಡಲ್ಲ. ನ್ಯಾಯಾಲಯದ ಬಗ್ಗೆ ಗೌರವವಿದೆ. ಆದರೆ, ಇದೆಲ್ಲವೂ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಕೈಗೊಂಬೆಯಾಗಿಸಿಕೊಂಡು ಮಾಡಿದ ಕುತಂತ್ರ ಎಂಬದರಲ್ಲಿ ಎರಡು ಮಾತಿಲ್ಲ ಎಂದು ಆರೋಪಿಸಿದರು. ಯಡಿಯೂರಪ್ಪ, ನಿರಾಣಿ, ಜೊಲ್ಲೆ , ಜನಾರ್ದನ ರೆಡ್ಡಿ, ಎಚ್.ಡಿ. ಕುಮಾರಸ್ವಾಮಿ ವಿಚಾರಣೆಗೆ ತನಿಖಾ ಸಂಸ್ಥೆಗಳು ಅನುಮತಿ ಕೇಳಿದರೂ ಕೊಡದ ರಾಜ್ಯಪಾಲರು, ಸಾಮಾಜಿಕ ಕಾರ್ಯಕರ್ತನೊಬ್ಬನ ಮನವಿಗೆ ಅನುಮತಿ ಕೊಟ್ಟಿರುವುದು ಯಾವ ನ್ಯಾಯ? ನಾನೇ ಪ್ರಧಾನಿಯವರ ವಿರುದ್ಧ ಆರೋಪ ಮಾಡಿದರೆ, ಅವರು ರಾಜೀನಾಮೆ ಕೊಡುತ್ತಾರೆಯೇ? ಇದೆಲ್ಲ ರಾಜ್ಯಪಾಲರ ಮೂಲಕ ಬಿಜೆಪಿ ನಡೆಸಿದ ಷಡ್ಯಂತ್ರ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಶಾಸಕ ಶಿವಗಂಗಾ ಹೇಳಿದರು.