ಜೈಪುರ್/ನವದೆಹಲಿ: ಸಚಿನ್ ಪೈಲಟ್ ಬಂಡಾಯ ಶಮನಗೊಂಡು ಪಕ್ಷಕ್ಕೆ ಮರಳಿದ ಬೆನ್ನಲ್ಲೇ ಶುಕ್ರವಾರ (ಆಗಸ್ಟ್ 14, 2020) ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶೇಷ ಅಧಿವೇಶನದಲ್ಲಿ ನಡೆದ ಧ್ವನಿ ಮತದಲ್ಲಿ ಗೆಹ್ಲೋಟ್ ವಿಶ್ವಾಸಮತ ಗೆದ್ದಿರುವುದಾಗಿ ಸ್ಪೀಕರ್ ತಿಳಿಸಿದ್ದು, ವಿಧಾನಸಭೆ ಕಲಾಪವನ್ನು ಆಗಸ್ಟ್ 21ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನಲ್ಲಿ ಹೊಸ ತಿರುವು ಎಂಬಂತೆ, ಶುಕ್ರವಾರದಿಂದ ಆರಂಭವಾಗುವ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಗುರುವಾರ ಬಿಜೆಪಿ ಘೋಷಿಸಿತ್ತು. ಅಸೆಂಬ್ಲಿಯಲ್ಲಿ ವಿಶ್ವಾಸಮತ ಸಾಬೀತುಪಡಿಸುವುದಾಗಿ ಕಾಂಗ್ರೆಸ್ ಹೇಳಿದ ಬೆನ್ನಲ್ಲೇ ಬಿಜೆಪಿಯಿಂದ ಈ ಘೋಷಣೆ ಹೊರಬಿದ್ದಿತ್ತು.
ನಿಯಮ ಪ್ರಕಾರ, ಮುಖ್ಯಮಂತ್ರಿಯೇ ವಿಶ್ವಾಸಮತ ನಿರ್ಣಯ ಮಂಡಿಸಿದರೆ, ಇತರೆ ಯಾವುದೇ ಸದಸ್ಯರು ಮಂಡಿಸುವ ಅವಿಶ್ವಾಸ ನಿರ್ಣಯವು ಸೂಪರ್‌ಸೀಡ್ ಆಗುತ್ತದೆ. ಈಗ ವಿಶ್ವಾಸಮತ ಸಾಬೀತುಪಡಿಸುವುದರಿಂದ ಮುಂದಿನ 6 ತಿಂಗಳ ಕಾಲ ನೆಮ್ಮದಿಯಿಂದ ಇರಬಹುದು ಎಂಬ ಲೆಕ್ಕಾಚಾರದೊಂದಿಗೆ ಸಿಎಂ ಗೆಹ್ಲೋಟ್ ಕೂಡ ಬಹುಮತ ಸಾಬೀತಿಗೆ ಮುಂದಾಗಿದ್ದರು. ಆದರೆ, ಈವರೆಗೆ ಕಾಂಗ್ರೆಸ್ ಬಿಕ್ಕಟ್ಟಿ ನಿಂದ ದೂರ ಉಳಿಯಲು ಯತ್ನಿಸಿದ್ದ ಬಿಜೆಪಿ, ನಾವು ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ ಎಂದೇ ಹೇಳಿಕೊಂಡು ಬಂದಿತ್ತು. ಆದರೆ, ಈಗ ಏಕಾಏಕಿ ಈ ಘೋಷಣೆ ಮಾಡಿ ಅಚ್ಚರಿ ಮೂಡಿಸಿತ್ತು.