Advertisement
ಶ್ರೀಮದ್ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಮಳೆಯ ವರ್ಣನೆ ಅದ್ಭುತವಾಗಿದೆ: ಸೂರ್ಯಕಿರಣಗಳಿಂದ ಸಾಗರದ ನೀರುಹೀರಿ ಆಕಾಶವು ನವಮಾಸದ ಗರ್ಭ ಧರಿಸಿ ಈಗ ಮಳೆಯೆಂಬ ರಸಾಯನವನ್ನು ಸುರಿಸುವುದಂತೆ! ನೀರು ತುಂಬಿದ ಮೋಡಗಳು ಅಲಸಗತಿಯಿಂದ ಬೆಟ್ಟಗಳ ಮೇಲೆ ನಿಂತು ನಿಂತು ದಣಿವಾರಿಸಿ ನಡೆಯುತ್ತಿವೆ! ಸೂರ್ಯನನ್ನು ಮೋಡಗಳು ಪೂರ್ಣವಾಗಿ ಮುಚ್ಚಿರುವುದರಿಂದಾಗಿ ಕಮಲ-ಮಾಲತಿ ಮೊದಲಾದ ಹೂಗಳ ಅರಳುವಿಕೆ-ಮುಚ್ಚುವಿಕೆಗಳಿಂದ ಮಾತ್ರ ಉದಯಾಸ್ತಗಳನ್ನೂ ಊಹಿಸಬೇಕಾಗಿದೆ! ಮೋಡಗಳೆಂಬ ಕೃಷ್ಣಾಜಿನ ಹೊದ್ದು, ವರ್ಷಾಧಾರೆಯ ಜನಿವಾರ ಧರಿಸಿ ಗಾಳಿತುಂಬಿ ಮೊರೆಯುವ ಗುಹೆಗಳಿರುವ ಬೆಟ್ಟಗಳು ವೇದಘೋಷ ಮಾಡುವಂತಿದೆಯಂತೆ! ಅಲ್ಲದೆ ನೇರಿಳೆಯ ಹಣ್ಣುಗಳನ್ನು ತಿಂದು ಕಪಿಗಳೂ ಆನೆಗಳೂ ಮದಿಸಿವೆ, ನವಿಲುಗಳೂ, ಚಾತಕಗಳೂ ಮೆರೆದಿವೆ, ಕೊಕ್ಕರೆಗಳೂ, ಇತರ ಜಲಪಕ್ಷಿಗಳೂ ನಲಿದಿವೆ.
Related Articles
Advertisement
ವರಕವಿ ಕುಮಾರವ್ಯಾಸನು “ಮುಗಿಲ ಬೆನಕಗೆ ಲಡ್ಡುಗೆಗಳಾದುವು ಸಮಸ್ತಗ್ರಹಸುತಾರೆಗಳು’ ಎಂದರೆ ಪಂಪನು “ಕಾಮನ ಕಾರ್ಮುಕದಂತೆ ಕಾರ್ಮುಕಂ’ ಎಂದು ಇಂದ್ರ ಧನುಸ್ಸನ್ನು ವರ್ಣಿಸುತ್ತಾನೆ. ಕಾವ್ಯಸಾರವು ಆಗಸ-ಭೂಮಿಗಳ ಪಾಣಿಗ್ರಹಣದ ಧಾರೆಯೆರೆಯುವಿಕೆ ಈ ಮಳೆಯೆಂದರೆ ಮತ್ತೂಬ್ಬ ಕನ್ನಡ ಕವಿ ಪರ್ವತಲಿಂಗಕ್ಕೆ ಮೇಘ ಗರ್ಜನೆಯ ಮಂತ್ರಗಳ ನಡುವೆ ಆಲಿಕಲ್ಲಿನ ಪುಷ್ಪಾರ್ಪಣೆಯನ್ನು ಮಾಡುತ್ತಾ ಮಳೆಯು ಅಭಿಷೇಕಿಸಿದೆಯೆನ್ನುತ್ತಾನೆ! ಕುವೆಂಪು ಅವರು ಮಲೆನಾಡಿನ ಮಳೆಯನ್ನು “ಕಾರ್‌ಕಾಳಿ’ಯೆಂದು ವರ್ಣಿಸಿ ಮಳೆಗಾಲದ ಮೊದಲ ಸೇಕದಿಂದುದ್ಭವಿಸುವ ಮಣ್ಣಿನ ಸುಗಂಧ, ಮಿಂಚಿನ ಸಂಚು, ಗುಡುಗಿನ ಬೆಡಗನ್ನು ಶ್ರೀರಾಮಾಯಣ ದರ್ಶನದಲ್ಲಿ ಮನಸಾ ಕಥಿಸಿದರೆ ಬೇಂದ್ರೆಯವರು “ಶ್ರಾವಣ’ದ ಸಾರಸರ್ವಸ್ವವನ್ನು ಬಯಲು ಸೀಮೆಯಲ್ಲಿ ಪ್ರತ್ಯಕ್ಷೀಕರಿಸುತ್ತಾರೆ.
ಸಂಘಂ ಕವಿಗಳುತಮಿಳಿನ ಸಂಘಂ ಕವಿಗಳು ಕೆಮ್ಮಣ್ಣು ನೆಲಕ್ಕೆ ಬಿದ್ದ ನೀರು ಓಕುಳಿಯ ಬಣ್ಣ ತಾಳಿದ್ದನ್ನು ಕಂಡು ಅದನ್ನು ವೃಷ್ಟಿಯಜ್ಞದ ಅವಭೃಥ, ಬಾನುಭುವಿಗಳ ವಸಂತೋತ್ಸವವೆಂದರೆ, ತೆಲುಗಿನ ಕವಿ-ಸಾಹಿತಿ ಸಮರಾಂಗಣ ಸಾರ್ವಭೌಮ ಶ್ರೀಕೃಷ್ಣದೇವರಾಯ “ಅಮುಕ್ತ ಮೌಲ್ಯ’ದಲ್ಲಿ ಗೃಹಿಣಿಯರು ಮಳೆಗೆ ಮುನ್ನವೇ ಬೆರಣಿ-ಉರವಲು, ಪುರಳೆ-ಸಂಡಿಗೆ-ಉಪ್ಪಿನಕಾಯಿಗಳನ್ನು ಹವಣಿಸಿಕೊಳ್ಳುವ ಸಂಭ್ರಮದಿಂದ ಮೊದಲ್ಗೊಂಡು ಎಲ್ಲ ಮುಖಗಳನ್ನೂ ವಿವರಿಸುತ್ತಾನೆ! ಹಿಂದಿಯ ಗಾಗಾ-ಭಡ್ಕರಿ ಸಂವಾದದ ಜನಪದ ಗೀತೆಗಳ ಮಳೆಯ ಹಿನ್ನೆಲೆಯ ಸೊಗಡು ಅರ್ಥಪೂರ್ಣ. ಕಾಶ್ಮೀರದ ಕವಿ ಕ್ಷೇಮೇಂದ್ರನು ಮಳೆಗೆ ಮುನ್ನ ಬೀಸುವ ಗಾಳಿಯನ್ನೇ ವರ್ಣಿಸುವ ವಿಧಾನ ಅತಿಮನೋಜ್ಞ. ಈ ಕಾಲದಲ್ಲಿ “ಜೀವನಕ್ರಮ’ ಅಸ್ತವ್ಯಸ್ತವಾದರೂ “ಜೀವಕ್ರಮ’ ಬಲು ರಮಣೀಯ. ಭೋಜರಾಜನ ಚಾರುಚರ್ಯೆಯೇ ಮೊದಲಾದ ಸ್ವಾಸ್ಥ್ಯ ಸಂಹಿತೆಗಳು ಮಳೆಗಾಲದ ಮೊದಲ ಗಾಳಿ-ಧೂಳು-ನೀರುಗಳ ಮಾಲಿನ್ಯದಿಂದಾಗಿ ಕಫ-ವಾತ-ಪಿತ್ತಗಳೆಂಬ ತ್ರಿದೋಷ ಹೆಚ್ಚುವುದೆಂದು ಎಚ್ಚರಿಸುತ್ತವೆ. ಈ ಕಾಲದಲ್ಲಿ ಸಮುದ್ರದ ಉಪ್ಪಿಗಿಂತ ಬೆಟ್ಟದ ಗಣಿಗಳಲ್ಲಿ ಸಿಗುವ ಚೌಳುಪ್ಪು ಒಳಿತು. ಎತ್ತರದ ಮನೆಗಳು, ಒಣಗಿದ ಬಿಳಿದಲ್ಲದ ವಸ್ತ್ರಗಳು, ಅಗರುಧೂಪ, ಹೊಸ ಅಕ್ಕಿ-ಗೋಧಿ, ಹುಳಿ-ಉಪ್ಪು ಹೆಚ್ಚಿರುವ ಸಂಬಾರಗಳು, ಪಂಚಕೋಲ ಚೂರ್ಣ, ಬಿಸಿಯೂಟ, ಆಳವಾದ ಬಾವಿಯ ನೀರು ಒಳಿತೆನ್ನುತ್ತವೆ. ನದೀ ತಟಾಕಸ್ನಾನಗಳು ನಿಷಿದ್ಧ. ಬಟ್ಟೆಗಳಿಗೂ ಹಾಸಿಗೆಗಳಿಗೂ ಧೂಪ ಹಾಕಬೇಕೆಂದೂ ತಿಳಿಸುತ್ತವೆ. ಗೃಹಿಣಿಯರ ಮಳೆಗಾಲದ ಪೂರ್ವಸಿದ್ಧತೆಯನ್ನೂ ವಿವರಿಸುತ್ತವೆ. ಪಶುಗಳ ಆರೋಗ್ಯಕ್ಕೂ ಮುನ್ನೆಚ್ಚರಿಕೆಗಳನ್ನು ಕಥಿಸುತ್ತವೆ. ಭಗ್ನಪ್ರಣಯಿಗಳಿಗಂತೂ ಮೋಡದ ನೋಟವೇ ಮಂಕು ತರಿಸುತ್ತದೆ. ಹೀಗಾಗಿ ಮೊದಲ ಗುಡುಗಿನ ಸದ್ದು ವಿರಹಿಗಳ ಎದೆಯನ್ನೊಡೆಯುತ್ತದೆ. ಅಂತೆಯೇ ಪ್ರವಾಸಹೋದ ಪ್ರಿಯರು ಮಳೆಗಾಲಕ್ಕೆ ಮುನ್ನವೆ ಮನೆಯನ್ನು ಸೇರಬೇಕು. ಇದಕ್ಕಾಗಿ ಹಾತೊರೆದು ಎದುರು ನೋಡುವ ಕಾಂತೆಯರ ಸ್ಥಿತಿಯನ್ನು ಹಾಲಕವಿ ರಮಣೀಯವಾಗಿ ಕಥಿಸುತ್ತಾನೆ-ಗಂಡನು ಬರುವುದೆಂದೆಂದು ತಿಳಿಯಲು ದಿನದಿನಕ್ಕೂ ಗೋಡೆಯ ಮೇಲೆ ಮಸಿಯಲ್ಲಿ ಗೀಟೆಳೆಯುವ ಒಬ್ಬ ಹಳ್ಳಿಯ ಹೆಣ್ಣು ಮಳೆಬಂದು ಮಾಡು ಸೋರಿದಾಗ ಮನೆಯನ್ನು ತಿದ್ದದೆ ಗುರುತುಗೀಟುಗಳು ಅಳಿಸಿಹೋಗದಿರುವಂತೆ ಕೈಯಡ್ಡವಿರಿಸಿ ಸುಮ್ಮನೆ ನಿಂತಳಂತೆ ! (ದೀರ್ಘ ಲೇಖನದ ಆಯ್ದ ಭಾಗ)
ಶತಾವಧಾನಿ ಆರ್. ಗಣೇಶ್