Advertisement

ಚಿಣ್ಣರ ಬಿಂಬದ ಕಾರ್ಯ ರಾಷ್ಟ್ರಕ್ಕೆ ಮಾದರಿ:ಡಿ.ಕೆ. ಶಿವಕುಮಾರ್‌

04:20 PM Feb 05, 2019 | Team Udayavani |

ಮುಂಬಯಿ: ಮನುಷ್ಯರ ಹುಟ್ಟು ಆಕಸ್ಮಿಕವಾದುದು, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಇವೆಲ್ಲದರ ನಡುವೆ ನಾವೇನು ಸಾಧನೆ ಮಾಡುತ್ತೇವೆ ಎನ್ನುವುದು ಮುಖ್ಯ. ನನಗೆ ಈ ಜಾತಿ ಬೇಡ, ನನಗೆ ಈ ಸಂಸ್ಕೃತಿ ಬೇಡ ಎಂದು ವಾದ ಮಾಡುವುದು ಸರಿಯಲ್ಲ. ಚಿಣ್ಣರ  ಬಿಂಬ ಎಂಬ ಈ ಒಂದು   ಕಾರ್ಯಕ್ರಮದಲ್ಲಿ ಬಹುಷ‌ಃ ಜಾತಿ, ಧರ್ಮ ಅನ್ನೋದು ಏನೂ ಇಲ್ಲ. ಇಲ್ಲಿರೋ ಮಕ್ಕಳಲ್ಲಿ ಯಾರನ್ನೂ ಅವರ ಜಾತಿಗಳಿಂದ ಗುರುತಿಸ ಲಾಗಿಲ್ಲ. ಬದಲಿಗೆ, ಅವರನ್ನು ಅವರಲ್ಲಿರೋ ಪ್ರತಿಭೆಯಿಂದ ಗುರುತಿಸಲಾಗಿದೆ ಎಂದು  ಕರ್ನಾಟಕ  ಸರಕಾರದ ಕನ್ನಡ -ಸಂಸ್ಕೃತಿ  ಸಚಿವ‌ ಡಿ. ಕೆ. ಶಿವಕುಮಾರ್‌ ಅವರು ಹೇಳಿದರು.

Advertisement

ವಿಶ್ವಕ್ಕೆ ನಮ್ಮ ಕನ್ನಡ ಮಕ್ಕಳ ಪ್ರತಿಭೆಯನ್ನು ತೋರಿಸಬೇಕು ಎನ್ನುವ ಹೊರನಾಡು ಮುಂಬಯಿಯಲ್ಲಿ  ಕನ್ನಡ ಬಂಧುಗಳು ಜತೆಗೂಡಿ ಚಿಣ್ಣರ ಬಿಂಬ ಸಂಸ್ಥೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಿ ದೇಶದ ಭವಿಷ್ಯ ಉತ್ತಮವಾಗಿ ಸಾಗಲು ಜಾತಿ ಭೇದ ಮರೆತು ಒಗ್ಗಟ್ಟು ಪ್ರದರ್ಶಿಸುತ್ತಾ ನಮ್ಮ ಕನ್ನಡ, ಸಂಸ್ಕೃತಿ-ಭಾಷೆ ಚಿಣ್ಣರ ಬಿಂಬದ ಮೂಲಕ ಉಳಿಸುತ್ತಿದ್ದಾರೆ. ಜತೆಗೂಡಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂಬ ಸಂದೇಶವನ್ನು ಜಗತ್ತಿಗೆ ಚಿಣ್ಣರ ಬಿಂಬ ಸಾರಿರುವುದು ಸಂತೋಷ ತಂದಿದೆ. ಹೊರನಾಡಿನಲ್ಲಿದ್ದುಕೊಂಡು ಕನ್ನಡ ನಾಡಿನ ಸಂಸ್ಕೃತಿ, ಭಾಷೆಯನ್ನು ವಿಶ್ವಕ್ಕೆ ಸಾರುತ್ತಿರುವ ಚಿಣ್ಣರ ಬಿಂಬದ ಕಾರ್ಯ ಶ್ಲಾಘನಾರ್ಹ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು. ಅವರು ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಫೆ.3ರಂದು ಜರಗಿದ ಚಿಣ್ಣರ ಬಿಂಬದ 16ನೇ ಮಕ್ಕಳ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ಅವಿಭಜಿತ ದಕ್ಷಿಣ ಕನ್ನಡಿಗರು ಸಾಹಿತ್ಯ,ಸಂಸ್ಕೃತಿ, ಉದ್ಯಮ, ಕಲೆ, ಹೀಗೆ ಎಲ್ಲ  ಕ್ಷೇತ್ರಗಳಲ್ಲಿ ಇತರರಿಗೆ ಮಾದರಿ ಎನಿಸಿದವರು ಎಂದು ಬಣ್ಣಿಸಿದ ಡಿ.ಕೆ. ಶಿವಕುಮಾರ್‌, ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಜವಾಬ್ದಾರಿ ಹೆತ್ತವರಾಗಿರುವ ನಮಗಿದೆ. ಇಂಥದರಲ್ಲಿ ಚಿಣ್ಣರ ಬಿಂಬದಂತಹ ಕಲಾ ಸಂಸ್ಕೃತಿಯಿಂದ ಕೂಡಿದ ಸಂಸ್ಥೆಯಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ಪೋಷಕರು ಅದೃಷ್ಟವಂತರು ಎಂದೇ ಹೇಳಬಹುದು.  

Advertisement

ನಾವೆಲ್ಲ ಹೃದಯ ಶ್ರೀಮಂತಿಕೆಯಿಂದ ಸಂಸ್ಥೆಗೆ ಸಹಾಯ ಮಾಡಬೇಕು. ಕರ್ನಾಟಕ ಸರಕಾರ ಪ್ರತೀ ವರ್ಷವೂ ಚಿಣ್ಣರ ಬಿಂಬಕ್ಕೆ ಆರ್ಥಿಕ ನೆರವು ನೀಡುವಂತೆ ಖಚಿತಪಡಿಸಲು ನಾನು ಇಲಾಖೆಯ ಅಧಿಕಾರಿಗಳಲ್ಲಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವೆನು. ಈ ಸಂಸ್ಥೆಗೆ ನಾನು ನನ್ನ ಸಂಪೂರ್ಣ ಸಹಕಾರವನ್ನು ನೀಡಲಿದ್ದೇನೆ ಎಂದವರು ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.
ಗೌರವ ಅತಿಥಿಯಾಗಿ ಆಗಮಿಸಿದ್ದ ಬಿ. ಎಂ. ಫಾರೂಖ್‌ (ಎಂಎಲ್‌ಸಿ) ಅವರು ಮಾತನಾಡುತ್ತಾ,  ಮಕ್ಕಳ ಮನಸ್ಸಿನಲ್ಲಿ ಯಾವುದೇ ಜಾತಿ, ಧರ್ಮದ ಭಾವನೆ ಇರುವು ದಿಲ್ಲ. ಅವರು ನಮ್ಮ ಭವಿಷ್ಯದ ಆಸ್ತಿಯಾಗಿದ್ದಾರೆ. ಅವರ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುತ್ತ ಅವರನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಕಾಶ್‌ ಭಂಡಾರಿ ಅವರ ಸಾಹಸ ಶ್ಲಾಘನೀಯವಾಗಿದೆ. ಇವರು ಮುಂಬಯಿಯಲ್ಲಿ ಪೊಲೀಸ್‌ ಸೇವೆಗೆ ಸೇರಿದ ಉನ್ನತ ಮಟ್ಟದಲ್ಲಿ ಬಿರುದನ್ನು ಪಡೆದುಕೊಂಡು ಹೆಸರುಗಳಿಸಿದಂತಹ     ಸಾಹಸಿ.  ತಮ್ಮ ತಾಯ್ನಾಡಿನ ಸಂಸ್ಕೃತಿಯನ್ನು ಉಳಿಸುವು ದಕ್ಕೋಸ್ಕರ ಅವರು ಕಟ್ಟಿರುವ ಈ ಚಿಣ್ಣರ ಬಿಂಬ ಬಹಳ ಉತ್ತಮವಾದ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ಸಚಿವರಾದ ಡಿ. ಕೆ. ಶಿವಕುಮಾರ್‌ ಅವರು ಈಗಾಗಲೇ ಹಲವು ಆಶ್ವಾಸನೆಗಳನ್ನು ನೀಡಿದ್ದಾರೆ. ನನಗೆ ಅವರ ಬಳಿ ಇನ್ನೊಂದು ಮನವಿ ಏನೆಂದರೆ, ಮುಂದೆ ಅನುಕೂಲವಾದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಾಶ್‌ ಭಂಡಾರಿ ಅವರಿಗೂ ಕೊಡಬೇಕೆಂದು ನಾನು ಅವರಲ್ಲಿ ಕೇಳಿಕೊಳ್ಳುತ್ತೇನೆ. ಯಾಕೆಂದರೆ, ಹೊರನಾಡಿನಲ್ಲಿದ್ದುಕೊಂಡು ಅವರು ಕನ್ನಡ ನಾಡಿನ ಸಂಸ್ಕೃತಿ-ಭಾಷೆಯನ್ನು ಉಳಿಸುವಲ್ಲಿ ಮಾಡುತ್ತಿರುವ ಕೆಲಸ ಎಲ್ಲರಿಗೂ ಆದರ್ಶವಾಗಿದೆ ಎಂದು ಹೇಳುತ್ತ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು.

“ಚಿಣ್ಣರ ಬಿಂಬ ಮಕ್ಕಳ ಹಬ್ಬವಾಗಿ ಸಂಭ್ರಮಿಸಬೇಕು’
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉದಯವಾಣಿಯ ಸಂಪಾದಕ ಅರವಿಂದ್‌ ನಾವಡ ಅವರು, ಸಂಸ್ಥೆ ಬೆಳೆಯಲು ಬರೇ ನಾಲ್ಕೈದು ಜನ ಪದಾಧಿಕಾರಿಗಳಿದ್ದರೆ ಸಾಕಾಗುವುದಿಲ್ಲ ಅದನ್ನು ಬೆಳೆಸುವುದಕ್ಕೂ ಜನ ಬೇಕು ಅದು ನಿಮ್ಮಂತಹ ಸಭಿಕರಿಂದ ಸಾಧ್ಯವಾಗುತ್ತದೆ. ಇದು ಕೇವಲ ಮಕ್ಕಳ ಉತ್ಸವ ಅಲ್ಲದೆ,  ಮಕ್ಕಳ ಒಂದು ಹಬ್ಬವಾಗಿ ಸಂಭ್ರಮಿಸಬೇಕು. ಚಿಣ್ಣರ ಬಿಂಬ ಕೇವಲ ಸಂಸ್ಕೃತಿಯಿಂದ ಕಟ್ಟಿದ ಸಂಸ್ಥೆಯಲ್ಲ ಭಾಷೆಯಿಂದ ಕಟ್ಟಿದ ಸಂಸ್ಥೆಯಾಗಿದೆ. ಸಾಮಾನ್ಯವಾಗಿ ಒಂದು ಅರಮನೆ ಅಥವಾ ಒಂದು ಕೋಟೆಗೆ ಹೋಗುವಾಗ ಅಲ್ಲಿ ಒಂದು ಹೆಬ್ಟಾಗಿಲು ಇರುತ್ತದೆ. ಅದೇ ರೀತಿ ಒಂದು ಸಂಸ್ಕೃತಿಗೆ ಭಾಷೆ ಹೆಬ್ಟಾಗಿಲು ಸಂಸ್ಕೃತಿಯನ್ನು ಉಳಿಸಬೇಕಾದರೆ ಭಾಷೆ ಉಳಿಯಲೇಬೇಕು. ಹೊರನಾಡಿನಲ್ಲಿದ್ದುಕೊಂಡು ಈ  ಕಾರ್ಯವನ್ನು ಮಾಡುತ್ತಿರುವ ಚಿಣ್ಣರ ಬಿಂಬಕ್ಕೆ ನಾನು ಕರ್ನಾಟಕದ ಜನರ ಪರವಾಗಿ ಅಭಿನಂದನೆಗಳನ್ನು ಹೇಳುತ್ತೇನೆ. ಹಾಗಾಗಿ, ಕನ್ನಡ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವಂತಹ ಇಂತಹ ನೈಜ ಸಂಸ್ಥೆಗಳಿಗೆ ಕರ್ನಾಟಕ ಸರಕಾರ ಸಹಕಾರವನ್ನು ನೀಡಲೇಬೇಕು ಎಂದರು.
ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು ಚಿಣ್ಣರ ಬಿಂಬದ ಮಕ್ಕಳ ಉತ್ಸವ ನಡೆದುಬಂದ ದಾರಿಯನ್ನು ನೆನಪಿಸುತ್ತಾ, 27 ಶಿಬಿರಗಳಲ್ಲಿ  4 ಸಾವಿರಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆದಿದ್ದು ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳನ್ನು ತಾನು ಕಾತುರದಿಂದ ನಿರೀಕ್ಷಿಸುತ್ತಿರುವೆ ಎಂದರು.  ವೇದಿಕೆಯಲ್ಲಿ ವಿಜಯಾ ಕುಮಾರ್‌ ಶೆಟ್ಟಿ, ಸುರೇಂದ್ರ ಕುಮಾರ್‌ ಹೆಗ್ಡೆ, ರಮೇಶ್‌ ರೈ, ತಾಳಿಪಾಡಿ ಭಾಸ್ಕರ ಶೆಟ್ಟಿ, ಎಸ್‌.ಜಿ. ಸಿದ್ಧರಾಮಯ್ಯ, ನಯನಾ ಭಂಡಾರಿ, ರೇಣುಕಾ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.  ಡಿ. ಕೆ. ಶಿವಕುಮಾರ್‌ ಹಾಗೂ ಚಿಣ್ಣರು ದೀಪ ಬೆಳಗಿಸಿ, ಕಲ್ಪವೃಕ್ಷದ ಹೂ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರಂಭದಲ್ಲಿ ಚಿಣ್ಣರು ನಾಡಗೀತೆಯನ್ನು ಹಾಡಿದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಮತ್ತು ಚಿಣ್ಣರ ಬಿಂಬದ ವಿದ್ಯಾರ್ಥಿ ಅಪೇಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next