Advertisement

ವಿಶ್ವ ಯುವ ಸಮ್ಮೇಳನಕ್ಕೆ ತೆರೆ

11:02 PM Nov 23, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಸತ್ಯಸಾಯಿ ಗ್ರಾಮದಲ್ಲಿ ಮೊಳಗಿದ ಸಾಯಿ ನಿನಾದ, ಸರ್ವ ಧರ್ಮಗಳ ಸಾಮೂಹಿಕ ಪ್ರಾರ್ಥನೆ, ಬಾಬಾ ಸಂದೇಶ ಸಾರುವ ಸಂಗೀತ ಗಾಯನ, ತಲೆದೂಗಿದ ದೇಶ-ವಿದೇಶಗಳಿಂದ ಬಂದ ಭಕ್ತರು, ಸೇವೆಯಿಂದ ನಾಯಕತ್ವದೆಡೆಗಿನ ಸಾಮೂಹಿಕ ಘೋಷಣೆ…

Advertisement

ಹೀಗೆ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಅಲಂಕೃತ ಪ್ರೇಮಾಮೃತ ಸಭಾಂಗಣದಲ್ಲಿ ಐದು ದಿನಗಳವರೆಗೆ ಅದ್ಧೂರಿಯಾಗಿ ನಡೆದ ವಿಶ್ವ ಯುವ ಸಮಾವೇಶ ಹಾಗೂ ಭಗವಾನ್‌ ಸತ್ಯಸಾಯಿ ಬಾಬಾರ 94ನೇ ಜಯಂತ್ಯುತ್ಸವದ ಪೂರ್ವ ಸಂಭ್ರಮಕ್ಕೆ ಶನಿವಾರ ಅಂತಿಮ ತೆರೆ ಬಿದ್ದಿತು.

ಶನಿವಾರ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕವಾಯತು ನಡೆಯಿತು. ಅದರಲ್ಲಿ ಸ್ವರ ಮೇಳ, ಅಶ್ವದಳದ ಶಿಸ್ತು ಬದ್ಧ ನಡಿಗೆ, ಸುಜ್ಞಾನ ಸುಧೆ ಸಾರುವ ವೇದಘೋಷ, ರಂಗುರಂಗಿನ ವಸ್ತ ವಿನ್ಯಾಸದಲ್ಲಿ ಮಿಂಚಿದ ನರ್ತಕಿಯರು, ಪ್ರೇಕ್ಷಕರನ್ನು ಮೋಡಿ ಮಾಡಿದ ಭಾರತೀಯ ನಾಟ್ಯಪಟುಗಳು, ವಿವಿಧ ದೇಶಗಳ ಪ್ರತಿನಿಧಿಗಳು, ಮೆರವಣಿಗೆಯಲ್ಲಿ ಕೈಮುಗಿದುಕೊಂಡು ಭಕ್ತಿ ಸಲ್ಲಿಸಿದ ಜನರು ಇವೆಲ್ಲವೂ ಭಗವಾನ್‌ ಸತ್ಯಸಾಯಿ ಬಾಬಾರವರ ಜನ್ಮ ದಿನೋತ್ಸವದ ಸಂಭ್ರಮೋಲ್ಲಾಸವನ್ನು ಇಮ್ಮಡಿಗೊಳಿಸಿದವು.

ದೇಶ, ವಿದೇಶಗಳ ಗಣ್ಯರ ಉಪಸ್ಥಿತಿ: ಬಾಬಾ ಜನ್ಮ ದಿನೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇಶ-ವಿದೇಶದ ಗಣ್ಯರು, ಆಹ್ವಾನಿತ ಅತಿಥಿಗಳು ಆಗಮಿಸಿದ್ದರು. ಅದರಲ್ಲಿ ಸಿಂಗಾಪುರದ ಭಕ್ತರ ಸಮೂಹ ಗಾಯನ, ಅಯಾನ್‌ ಅಲಿ ಬಂಗೇಶ್‌ ಮತ್ತು ಅಮಾನ್‌ ಅಲಿ ಬಂಗೇಶ್‌ ಸಹೋದರರು ಸರೋದ್‌ ವಾದನದ ದ್ವಂದ್ವ ಗಾಯನಗೋಷ್ಠಿ ನಡೆಸಿ, ನೆರೆದ ಜನಸ್ತೋಮ ತಲೆದೂಗುವಂತೆ ಮಾಡಿದರು.

ನೈಜೀರಿಯಾದ ಆಡಳಿತ ಉನ್ನತಾಧಿಕಾರಿ ಕ್ರಿಸ್‌ ಸಂಡೇಈಸ್‌, ಫಿಜಿಯಾದ ಆಡಳಿತ ಉನ್ನತಾಧಿಕಾರಿ ಯೋಗೀಶ ಪೂಂಜಾ, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಿಶ್ರಾಂತ ಕುಲಪತಿ ಪೊ›. ಶಶಿಧರ ಪ್ರಸಾದ್‌, ಅಮೆರಿಕದ ಖ್ಯಾತ ಉದ್ಯಮಿ ಐಸಾಕ್‌ ಟೈಗ್ರೆಟ್‌, ರಾಜೇಶ್ವರಿ ಬಿರ್ಲಾ, ಪ್ರೇಮಾ ಕೃಷ್ಣ, ಸಿ.ಶ್ರೀನಿವಾಸ್‌, ಬಿ.ಎನ್‌.ನರಸಿಂಹ ಮೂರ್ತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Advertisement

32 ದೇಶ ಗಳ 2000 ಯುವಜನರು ಭಾಗಿ: ಕಳೆದ ನ.19ರಿಂದ ಸತತ ಐದು ದಿನಗಳ ಕಾಲ ಪ್ರೇಮಾಮೃತ ಸಭಾಂಗಣದಲ್ಲಿ ನಡೆದ ವಿಶ್ವ ಯುವ ಸಮ್ಮೇಳನಕ್ಕೆ ಬಾಬಾರವರ ಜಯಂತ್ಯುತ್ಸವ ಆಚರಣೆಯೊಂದಿಗೆ ವಿಧ್ಯುಕ್ತವಾಗಿ ತೆರೆಬಿದ್ದಿತು. ಸಮ್ಮೇಳನದಲ್ಲಿ ಜಗತ್ತಿನ 32 ದೇಶಗಳ ಸುಮಾರು 2 ಸಾವಿರಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಭಾಗವಹಿಸಿದ್ದರು.

ಸೇವೆಯಿಂದ ನಾಯಕತ್ವದೆಡೆ ಎಂಬ ಘೋಷಣೆಯಡಿ ನಡೆದ ಜಾಗತಿಕ ಯುವ ಸಮಾವೇಶದಲ್ಲಿ ದೇಶ ಹಾಗೂ ಜಗತ್ತಿನ ಸಮಸ್ಯೆ, ಸವಾಲುಗಳ ಕುರಿತು ಚಿಂತನ, ಮಂಥನ ನಡೆಯಿತು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಮಾನವ ಸಂಪನ್ಮೂಲ ವ್ಯಕ್ತಿಗಳು, ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಚಿಂತಕರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದ್ದರು.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next