ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮೇಳಕ್ಕೆ ಭಾನುವಾರ ಅದ್ದೂರಿ ತೆರೆ ಬಿದ್ದಿದ್ದು, ನಾಲ್ಕು ದಿನದಲ್ಲಿ ಒಟ್ಟಾರೆ 14.50ಲಕ್ಷ ಜನರು ಭಾಗವಹಿಸಿದ್ದಾರೆ.
ಮೊದಲ ದಿನ 1.5 ಲಕ್ಷ, ಎರಡನೇ ದಿನ 3.5 ಲಕ್ಷ, ಮೂರನೇ ದಿನ 6 ಲಕ್ಷ, ನಾಲ್ಕನೇ ದಿನ 3.5 ಲಕ್ಷ ಜನರು ಮೇಳಕ್ಕೆ ಬಂದಿದ್ದು, ಒಟ್ಟು 5.75 ಕೋಟಿ ರೂ. ಗೂ ಅಧಿಕ ವಹಿವಾಟು ನಡೆದಿದೆ. ಮೊದಲ ದಿನ 6.5 ಲಕ್ಷ ಜನರು ಭೋಜನ ಸವಿದಿದ್ದು, ಎರಡನೇ ದಿನ 8.5 ಲಕ್ಷ, ಮೂರನೇ ದಿನ 10 ಲಕ್ಷ, ನಾಲ್ಕನೇ ದಿನ 7 ಲಕ್ಷ ಜನರು ಸೇರಿ ನಾಲ್ಕು ದಿನಗಳಲ್ಲಿ 32ಲಕ್ಷ ಜನರು ಭೋಜನ ಸವಿದಿದ್ದಾರೆ.
ಕೃಷಿಮೇಳದಲ್ಲಿ ಸುಮಾರು 700 ಕ್ಕೂ ಅಧಿಕ ಕೃಷಿಗೆ ಪೂರಕವಾದ ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿತ್ತು. ರಾಜ್ಯ ಕೃಷಿ ವಿವಿಗಳು, ತೋಟಗಾರಿಕೆ, ಅರಣ್ಯ ಇಲಾಖೆ, ಕೃಷಿ ಮಾರುಕಟ್ಟೆ ಮಂಡಳಿ, ಕರ್ನಾಟಕ ಹಾಲು ಮಹಾಮಂಡಳಿ, ಕೃಷಿ ಪರಿಕರಗಳ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಹಲವರು ಮಳಿಗೆಗಳನ್ನು ಸ್ಥಾಪಿಸಿದ್ದರು.
ಮೇಳದಲ್ಲಿ ಇತ್ತೀಚೆಗೆ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ, ಸುಧಾರಿತ ಬೇಸಾಯ ಪದ್ಧತಿಗಳ ತಾಕುಗಳು, ತೋಟಗಾರಿಕಾ ಬೆಳೆಗಳು, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳು ಹಾಗೂ ಮಹತ್ವದ ಔಷಧೀಯ ಮತ್ತು ಸುಗಂಧಯುಕ್ತ ಸಸ್ಯಗಳು, ಸಮಗ್ರ ಪೋಷಕಾಂಶಗಳು ಮತ್ತು ವಿವಿಧ ರೀತಿಯ ಪ್ರದರ್ಶನಗಳನ್ನು ತೆರೆದಿಡಲಾಗಿತ್ತು.
ಅಗ್ರಿಟೆಕ್ ಸೆಂಟರ್ ಸ್ಥಾಪಿಸಲು ಚಿಂತನೆ: ಕೃಷಿ ಕ್ಷೇತ್ರದ ಸುಧಾರಣೆಗೆ ತಂತ್ರಜ್ಞಾನದ ಅಳವಡಿಕೆ ಅವಶ್ಯವಿದ್ದು, ಅಗ್ರಿಟೆಕ್ ಸೆಂಟರ್ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿಮೇಳದ ಸಮಾರೋಪದಲ್ಲಿ ಮಾತನಾಡಿದರು.
ರೈತರ ಬೆಳೆಗೆ ಬೆಲೆ ಬರಲು ಸಾಕಷ್ಟು ಆವಿಷ್ಕಾರಗಳು ಆಗಬೇಕು. ಇಂಥ ಆವಿಷ್ಕಾರಗಳ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧ್ಯ. ರೈತರು ವ್ಯವಸಾಯದಲ್ಲಿ ಮುಂದುವರಿಯಲು ಅವರ ಆದಾಯ ಹೆಚ್ಚಬೇಕು. ಆದಾಯ ಹೆಚ್ಚಾದಾಗ ಮಾತ್ರ ಕೃಷಿ ಕಡೆಗೆ ಆಕರ್ಷಣೆ ಉಳಿಸಿಕೊಳ್ಳಲು ಸಾಧ್ಯ ಎಂದರು.
ರಾಜ್ಯದಿಂದ ಪ್ರಾರಂಭವಾದ ಇ-ಮಾರುಕಟ್ಟೆ ದೇಶವ್ಯಾಪಿ ವಿಸ್ತರಣೆಯಾಗಿದ್ದು, ರೈತರು ಬೆಳೆದ ಬೆಳೆಯನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ವ್ಯಾಪಾರ ಮಾಡಬಹುದು. ಶೇ.50ರಷ್ಟು ಜನ ಕೃಷಿಯನ್ನು ಅವಲಂಬಿಸಿ, ಸ್ಥಳೀಯವಾಗಿಯೇ ಉದ್ಯೋಗ ಸಿಗಬೇಕು. ರೈತ ಸಮುದಾಯ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವ ಮೂಲಕ ಜೀವನ ಹಸನಾಗಿಸಿಕೊಳ್ಳಬೇಕು ಎಂದರು.