Advertisement
ಒಂದು ರಾಜ್ಯ ಕೇಂದ್ರ ಗ್ರಂಥಾಲಯ, 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 26 ನಗರ ಕೇಂದ್ರ ಗ್ರಂಥಾಲಯಗಳು, 490 ಶಾಖಾ ಗ್ರಂಥಾಲಯಗಳು, 5766 ಗ್ರಾಪಂ ಗ್ರಂಥಾಲಯಗಳು, 15 ಸಂಚಾರಿ ಗ್ರಂಥಾಲಯಗಳು ಸೇರಿದಂತೆ ಒಟ್ಟು 6,328 ಗ್ರಂಥಾಲಯಗಳಿದ್ದು, ಆ ಪೈಕಿ ಗ್ರಂಥಪಾಲಕರು, ಗ್ರಂಥಾಲಯ ಸಹಾಯಕರು, ಮತ್ತಿತರೆ ಹುದ್ದೆಗಳಲ್ಲಿ 1,451 ಕಾಯಂ ಸಿಬ್ಬಂದಿ ಮತ್ತು ಗೌರವ ಸಂಭಾವನೆಯಡಿ 5,766 ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಕೊರತೆಯಿಂದ ನೂರಾರು ಶಾಲೆಗಳು ಬಾಗಿಲು ಮುಚ್ಚಿವೆ. ಇನ್ನೂ ಕೆಲ ಶಾಲೆಗಳಲ್ಲಿ ಖಾಲಿ ಉಳಿದಿರುವ ಕೊಠಡಿಗಳ ಸದ್ಬಳಕೆಗೆ ಇಲಾಖೆಗಳು ಮುಂದಾಗಿವೆ. ಶಾಲೆಗಳಲ್ಲಿ ಸುಸ್ಥಿತಿಯಲ್ಲಿರುವ 16,000 ಕೊಠಡಿಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲಿ ಶಿಥಿಲಗೊಂಡಿರುವ, ಬಾಡಿಗೆ ಅಥವಾ ಇನ್ಯಾವುದೋ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಪಂ ಗ್ರಂಥಾಲಯಗಳ ಸ್ಥಳಾಂತರಿಸುವ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ.
Related Articles
ಗ್ರಾಮೀಣ ಭಾಗದ ಗ್ರಂಥಾಲಯಗಳನ್ನು ಶಾಲಾ ಕೊಠಡಿಗಳಿಗೆ ಸ್ಥಳಾಂತರಿಸುವುದರಿಂದ ಬಹುಪಯೋಗಿಯಾಗಲಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮಸ್ಯೆಯಿಂದ ಮುಕ್ತಿಗೊಳಿಸುವುದರೊಂದಿಗೆ ಸರ್ಕಾರಿ ಶಾಲಾ ಮಕ್ಕಳ ಜ್ಞಾನಾರ್ಜನೆಗೆ ಒತ್ತು ನೀಡಿದಂತಾಗುತ್ತದೆ. ಆದರೆ, ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಜೋರಾಗಿ ಓದುವುದರಿಂದ ಗ್ರಂಥಾಲಯ ವಾಚಕರಿಗೆ ಸಮಸ್ಯೆಯಾಗಬಹುದು ಎನ್ನುತ್ತಾರೆ ಗದಗ ಬಿಇಒ ಎಂ.ಎ.ರಡ್ಡಿ.
Advertisement
ಇದು ಗ್ರಂಥಾಲಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿ ರಜನೀಶ್ ಗೋಯಲ್ ಅವರ ಚಿಂತನೆ. ಖಾಲಿ ಇರುವ ಶಾಲಾ ಕೊಠಡಿಗಳಿಗೆ ಗ್ರಂಥಾಲಯಗಳನ್ನು ಸ್ಥಳಾಂತರಿಸುವುದರಿಂದ ಜನರು ಮತ್ತು ಅಲ್ಲಿನ ಮಕ್ಕಳಿಗೆ ಅನುಕೂಲವಾಗುತ್ತದೆ. ಒಂದು ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ 105 ಗ್ರಾಪಂ ಗ್ರಂಥಾಲಯಗಳನ್ನು ಸ್ಥಳಾಂತಿಸಲಾಗುತ್ತದೆ. ಶಿಕ್ಷಣ ಇಲಾಖೆಯೊಂದಿಗೆ ಕಟ್ಟಡಗಳ ಹಸ್ತಾಂತರ ಪ್ರಕ್ರಿಯೆ ಆರಂಭಿಸಲಾಗಿದೆ.– ವೆಂಕಟೇಶ್ವರಿ, ಗದಗ ಜಿಲ್ಲಾ ಗ್ರಂಥಾಲಯ ಅಧಿಕಾರಿ – ವೀರೇಂದ್ರ ನಾಗಲದಿನ್ನಿ