Advertisement

ಕೊಂಡೋತ್ಸವದೊಂದಿಗೆ ಮಾದಪ್ಪನ ಜಾತ್ರೆಗೆ ತೆರೆ

07:31 AM Mar 09, 2019 | Team Udayavani |

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ 5 ದಿನಗಳಿಂದ ಜರುಗಿದ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕೊಂಡೋತ್ಸವದ ಮೂಲಕ ತೆರೆ ಎಳೆಯಲಾಯಿತು. ಮಹದೇಶ್ವರರ ಪರಮ ಭಕ್ತೆ ದುಂಡಮ್ಮನ ಮನೆ ತಂಬಡಗೇರಿಯಲ್ಲಿದ್ದು, ಆ ಮನೆಯಲ್ಲಿ ಮಹದೇಶ್ವರರು ಸೀಗೆಯ ಸೊಪ್ಪು ಹಾಗೂ ರಾಗಿ ಮುದ್ದೆ ಪ್ರಸಾದ ಸ್ವೀಕರಿಸಿದ್ದರು ಎಂಬ ಪ್ರತೀತಿ ಇದೆ.

Advertisement

ಈ ಹಿನ್ನೆಲೆ ಕೊಂಡೋತ್ಸವದ ದಿನದಂದು 12 ಜನ ಬೇಡಗಂಪಣ ಅರ್ಚಕರು ಪ್ರತೀತಿಯಂತೆ ಉಪವಾಸವಿದ್ದು, ದುಂಡಮ್ಮನ ಮನೆಯಲ್ಲಿ ಉದ್ಭವ ಮೂರ್ತಿ ಮಹದೇಶ್ವರನಿಗೆ ಪೂಜೆ ಸಲ್ಲಿಸಿ ಅಲ್ಲಿನ 12 ವೀರಭದ್ರ ಕಾಶಿ ಪೆಟ್ಟಿಗೆಗಳಿಗೂ ಪೂಜಾ ಕೈಂಕರ್ಯ ನೆರವೇರಿಸಿ ಬಾಯಿಗೆ ಬಟ್ಟೆ ಕಟ್ಟಿಕೊಂಡು ಧೂಪದ ಪೂಜೆ ನೆರವೇರಿಸಿದರು.

ಬಳಿಕ ತಂಬಡಗೇರಿ ಮಾರ್ಗವಾಗಿ ಮಾರ್ಗವಾಗಿ ಜಡೆಕಲ್ಲು ಮಂಟಪ ಸಮೀಪದ ಕೊಂಡೋತ್ಸವ ಗೋಪುರಕ್ಕೆ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ‌ ದೇವಾಲಯದ ಪ್ರವೇಶ ದ್ವಾರದಲ್ಲಿರುವ ವಿನಾಯಕನ ದೇವಾಲಯದಲ್ಲಿಯೂ ಸಹ 12 ವೀರಭದ್ರ ಕಾಶಿ ಪೆಟ್ಟಿಗೆಗಳಿಗೆ ಪೂಜೆ ಸಲ್ಲಿಸಿ ದೇವಾಲಯದ ಆವರಣಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು.

ಬಳಿಕ ಸಾಲೂರು ಬೃಹನ್ಮಠದ ಪಟ್ಟದಗುರುಸ್ವಾಮಿಗಳ ಸಮ್ಮುಖದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ರಾಜಗೋಪುರದ ಮುಂಭಾಗದ ಪ್ರದೇಶದಲ್ಲಿ ಬೆಜ್ಜಲಮರದಿಂದ ಸಿದ್ಧಪಡಿಸಲಾಗಿದ್ದ 20 ಅಡಿ ಉದ್ದ ಮತ್ತು 3 ಅಡಿ ಅಗಲದ ಕೊಂಡೋತ್ಸವವನ್ನು ಬೆಳಗ್ಗೆಯಿಂದ ಉಪವಾಸವಿದ್ದ 12 ಜನ ಬೇಡಗಂಪಣ ಅರ್ಚಕರು ಪ್ರವೇಶಿಸಿದರು.

ಈ ಮನಮೋಹಕ ಕೊಂಡೋತ್ಸದ ದೃಶ್ಯ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಾದಪ್ಪನ ಭಕ್ತಾದಿಗಳು ಬೂದಿ ಮುಚ್ಚಿದ ಕೆಂಡ ಭೂಲೋಕದ ಗಂಡ ಕೆಂಜೆಡೆಯ ಮುಕ್ಕಣ್ಣ ಮಹದೇವನಿಗೆ ಉಘೇ ಉಘೇ ಎಂಬ ಜೈಕಾರ ಮೊಳಗಿಸಿದರು. ಭಕ್ತಾದಿಗಳ ಜೈಕಾರ ಮುಗಿಲು ಮುಟ್ಟುವಂತಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next