ಗದಗ: ಬಯಲು ಬಹಿರ್ದೆಸೆ ಮುಕ್ತ ಅಭಿಯಾನಕ್ಕೆ ಜಿಲ್ಲೆಯಲ್ಲಿ ಗದಗ ನಾಂದಿ ಹಾಡಿತ್ತು. ಆದರೆ, ಅಧಿಕಾರಿಗಳು ಹಾಗೂ ಕಾಮಗಾರಿಯೊಂದರ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ತಿಂಗಳಿಂದ ಸಾರ್ವಜನಿಕ ಶೌಚಾಲಯದ ಬಾಗಿಲು ಮುಚ್ಚಿದೆ. ಈ ಭಾಗದ ನೂರಾರು ಜನರು ಬಹಿರ್ದೆಸೆಗಾಗಿ ಪುನಃ ಬಯಲಿನತ್ತ ಮುಖ ಮಾಡುವಂತಾಗಿದೆ.
ನಗರಸಭೆಯಿಂದ ಸ್ವಚ್ಛ ಭಾರತ ಯೋಜನೆಯಡಿ 2017-18ನೇ ಸಾಲಿನಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ತಲಾ 10 ಶೌಚಗೃಹಗಳನ್ನು ಹೊಂದಿದೆ. ಸುತ್ತಲಿನ ಹೊಂಬಳ ನಾಕಾ ಜನತಾ ಕಾಲೋನಿ, ಅಂಬೇಡ್ಕರ್ ನಗರ ಮತ್ತು ಆದಿ ಜಾಂಬವ ನಗರದ ನೂರಾರು ನಿವಾಸಿಗಳು ಇದನ್ನೇ ನಂಬಿದ್ದಾರೆ.
ಹೊಂಬಳ ನಾಕಾದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಸೇತುವೆಯ ಪಿಲ್ಲರ್ ನಿರ್ಮಿಸಲು ಗುಂಡಿ ತೆಗೆಯುವ ವೇಳೆ ಶೌಚಾಲಯದ ಪೈಪ್‌ಲೈನ್ ತುಂಡರಿಸಲಾಗಿದೆ. ಅದರೊಂದಿಗೆ ಶೌಚಾಲಯದಿಂದ ನೀರು ಹರಿಯದಂತೆ ಪೈಪ್ ಮುಚ್ಚಲಾಗಿದೆ. ಪರಿಣಾಮ ಕಳೆದ ಒಂದು ತಿಂಗಳಿಂದ ಇಲ್ಲಿನ ಶೌಚಾಲಯದ ಬಾಗಿಲು ಮುಚ್ಚಿದ್ದು, ಜನರು ಪರದಾಡುವಂತಾಗಿದೆ.
ಮತ್ತೊಂದೆಡೆ ಇಲ್ಲಿನ ಜನತಾ ಕಾಲೋನಿ, ಅಂಬೇಡ್ಕರ್ ಕಾಲೋನಿಗಳಲ್ಲಿ ನಗರಸಭೆಯಿಂದ ವೈಯಕ್ತಿಕ ಶೌಚಾಲಯ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಕೆಲವೆಡೆ ಶೌಚಾಲಯಗಳಿಗೆ ಮೇಲ್ಛಾವಣಿ ಹಾಕಿಲ್ಲ. ಇನ್ನೂ ಕೆಲವೆಡೆ ಶೌಚಾಲಯದ ನಾಲ್ಕು ಗೋಡೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಇನ್ನುಳಿದಂತೆ ಪೂರ್ಣಗೊಂಡಿರುವ ಯಾವೊಂದು ಶೌಚಾಲಯಕ್ಕೂ ಒಳಚರಂಡಿ ಸಂಪರ್ಕವಿಲ್ಲ. ನಗರದಲ್ಲಿ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ತೋರಿದಷ್ಟು ಆಸಕ್ತಿಯನ್ನು ನಗರಸಭೆ, ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ತೋರಿಲ್ಲ. ಇದರಿಂದಾಗಿ ಮನೆಗಳಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿದರೂ ಬಳಕೆಗೆ ಬಾರದಂತಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ಶರಣಪ್ಪ ಸೂಡಿ, ರಾಘವೇಂದ್ರ ಗಾಮನಗಟ್ಟಿ. ಮತ್ತೊಂದು ಗಬ್ಬೆದ್ದು ನಾರುತ್ತಿದೆ: ಇದೇ ಬಡಾವಣೆಯಲ್ಲಿ ಡಿ.ಸಿ.ಮಿಲ್ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಮಹಿಳಾ ಶೌಚಾಲಯದ ಹಳೆಯ ಕಟ್ಟಡದಲ್ಲಿ ಸಮರ್ಪಕ ನೀರಿನ ಸೌಲಭ್ಯ, ನಿರ್ವಹಣೆಯಿಲ್ಲದೇ ಗಬ್ಬೆದ್ದು ನಾರುತ್ತಿದೆ. ಈ ಮಾರ್ಗದಲ್ಲಿ ಜನರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ. ಶೌಚಾಲಯವನ್ನು ಸ್ವಚ್ಛಗೊಳಿಸಿ, ನೀರಿನ ಸೌಲಭ್ಯ ಕಲ್ಪಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಇದರ ಸುತ್ತಮುತ್ತಲಿನ ನಿವಾಸಿಗಳ ಬದುಕು ನರಕ ಸದೃಶವಾಗಿದೆ ಎಂಬುದು ಇಲ್ಲಿನ ಮಹಿಳೆಯರ ಅಳಲು. ಪರಿಣಾಮ ಬಡಾವಣೆಯಲ್ಲಿ ರಾಜಕಾಲುವೆ ಗಳಿಗೆ ಹೊಂದಿಕೊಂಡಿರುವ ನಿವಾಸಿಗಳು ಒಳಚರಂಡಿ ನೀರನ್ನು ನೇರವಾಗಿ ರಾಜಕಾಲುವೆಗಳಿಗೆ ಹರಿಸುತ್ತಿದ್ದಾರೆ. ಇನ್ನುಳಿದಂತೆ ನೂರಾರು ಜನರು ಬಡಾವಣೆಯಲ್ಲಿ ಸುತ್ತಲಿನ ಡಿ.ಸಿ.ಮಿಲ್, ರೈಲ್ವೆ ಹಳಿ ಅಕ್ಕ-ಪಕ್ಕದ ಬೇಲಿ ಕಂಟಿಗಳತ್ತ ಮುಖ ಮಾಡುವಂತಾಗಿದೆ. ಮಹಿಳೆ ಹಾಗೂ ಯುವತಿಯರು ಸೂರ್ಯ ಮರೆಯಾಗುವುದನ್ನೇ ಕಾಯುವ ಅನಿವಾರ್ಯತೆ ಎದುರಾಗಿದೆ.
ಬಡಾವಣೆಯಲ್ಲಿ ಶೌಚಾಲಯದ ಸಮಸ್ಯೆಯಿಂದಾಗಿ ಜನರು ಬಯಲಿಗೆ ತೆರಳುತ್ತಿದ್ದಾರೆ. ಮಹಿಳೆಯರು, ಯುವತಿಯರು ರಾತ್ರಿಗಾಗಿ ಕಾಯುವ ಅನಿವಾರ್ಯತೆ ಎದುರಾಗಿದ್ದು, ವಿಷ ಜಂತುಗಳ ಕಾಟವೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಡಿಸಿ ಮಿಲ್‌ಗೆ ಹೊಂದಿಕೊಂಡಿರುವ ಹಳೇ ಶೌಚಾಲಯವನ್ನು ಸ್ವಚ್ಛಗೊಳಿಸಿ, ನೀರಿನ ಸಂಪರ್ಕ ಕಲ್ಪಿಸಬೇಕು. ಹೊಂಬಳ ನಾಕಾ ದೊಡ್ಡ ಶೌಚಾಲಯ ಪುನಾರಂಭಕ್ಕೆ ಕ್ರಮ ಕೈಗೊಳ್ಳಬೇಕು.
ಕೃಷ್ಣಾ ಎಚ್. ಹಡಪದ,
ಹೊಂಬಳ ನಾಕಾ ನಿವಾಸಿ
ಸೇತುವೆ ಕಾಮಗಾರಿಗೆ ಅಡ್ಡಿಯಗಿದ್ದ ಶೌಚಾಲಯದ ತ್ಯಾಜ್ಯ ನೀರಿನ ಪೈಪ್‌ಲೈನ್‌ನ್ನು ತುಂಡರಿಸಲಾಗಿದೆ. ಹೀಗಾಗಿ ಶೌಚಾಲಯ ಬಂದ್ ಮಾಡಲಾಗಿದ್ದು, ಅದನ್ನು ದುರಸ್ತಿಗೊಳಿಸುವಂತೆ ಹಲವು ಬಾರಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಇನ್ನೂ ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಸ್ಥಳೀಯ ನಿವಾಸಿಗಳೊಂದಿಗೆ ತೆರಳಿ ಕಾಮಗಾರಿ ಪ್ರತಿಭಟನೆಯೊಂದಿಗೆ ಬಂದ್ ಮಾಡಿಸುತ್ತೇನೆ.
ಕೃಷ್ಣ ಪರಾಪುರ,
ನಗರಸಭೆ ಸದಸ್ಯ