Advertisement

ಬುದ್ಧಿವಂತ ಮೀನು , ಕೊಕ್ಕರೆಯ ಸಂಚು ವಿಫ‌ಲಗೊಳಿಸಿದ ಆನೆ

01:15 PM May 08, 2021 | Team Udayavani |

ಒಂದು ಕಾಡಿನಲ್ಲಿ ಆನೆ ಇತ್ತು. ಅದರ ಉದ್ದದ ಸೊಂಡಿಲು, ಅರ್ಧ ತುಂಡಾಗಿರುವ ದಾಡೆ, ದೊಡ್ಡದೊಡ್ಡ ಕಿವಿ, ಹೊಟ್ಟೆಯ ಕಾರಣದಿಂದ ಯಾರೂ ಇದರ ಬಳಿ ಸ್ನೇಹಿತರಾಗುತ್ತಿರಲಿಲ್ಲ. ಇದೇ ಅದರ ಬೇಸರಕ್ಕೆ ಕಾರಣವಾಗಿತ್ತು. ಹೀಗಾಗಿ ಅದು ಕಾಡಿನಾದ್ಯಂತ ಸುತ್ತಾಡಿ, ತನಗೆ ಬೇಕಾದ ಆಹಾರವನ್ನು ತುಂದು ಸುಮ್ಮನೆ ತಿಂದುಕೊಂಡು ಮಲಗುತ್ತಿತ್ತು. ಬೇಸರವಾದಾಗ ನದಿ ದಂಡೆಯ ಮೇಲೆ ಕುಳಿತು ಕಣ್ಣೀರು ಹಾಕುತ್ತಿತ್ತು.

Advertisement

ಒಂದು ದಿನ ಆನೆ ಹೀಗೆ ನದಿ ದಂಡೆಯ ಮೇಲೆ ಕುಳಿತು ಕಣ್ಣೀರು ಹಾಕುತ್ತಿದ್ದಾಗ ಸುಂದರವಾದ ಮೀನೊಂದು ದಡದ ಸಮೀಪ ಬಂದು, “ಬಹಳ ದಿನಗಳಿಂದ ನಿನ್ನ ನೋಡುತ್ತಿದ್ದೇನೆ. ಹೀಗೆ ಒಬ್ಬನೇ ಬಂದು ಕಣ್ಣೀರು ಹಾಕುತ್ತಿರುವೆಯಲ್ಲ’ ಎಂದಿತು. ಅದಕ್ಕೆ ಆನೆ, ತನ್ನ ಮನದ ನೋವನ್ನೆಲ್ಲ ಮೀನಿನ ಮುಂದೆ ತೋಡಿಕೊಂಡಿತು. ಆಗ ಮೀನು ಮರುಕಪಟ್ಟು, ಇವತ್ತಿಂದ ನಿನಗೆ ನಾನೇ ಸ್ನೇಹಿತ. ನಿನ್ನ ಏನೇ ನೋವು, ದುಃಖಗಳಿದ್ದರೂ ನನ್ನೊಂದಿಗೆ ಹಂಚಿಕೋ ಎಂದಿತು. ಆನೆ ಅದಕ್ಕೆ ಆಯಿತೆಂದು ಒಪ್ಪಿತು. ಮರುದಿನದಿಂದ ನಿತ್ಯವೂ ನದಿ ದಂಡೆಯ ಬಳಿಗೆ ಹೋಯಿತು. ಮೀನಿಗೆ ಒಂದಷ್ಟು ಆಹಾರವನ್ನು ಕೊಟ್ಟು ಅದರೊಂದಿಗೆ ಸಾಕಷ್ಟು ಮಾತನಾಡಿ ತನ್ನ ಮನೆಗೆ ಹಿಂದಿರುಗುತ್ತಿತ್ತು. ಬಹುದಿನಗಳು ಹೀಗೆ ಸಾಗಿದವು.

ಆನೆ ನಿತ್ಯವೂ ನದಿ ದಂಡೆಗೆ ಹೋಗುವುದು, ಅಲ್ಲಿಂದ ಖುಷಿಖುಷಿಯಾಗಿ ಹಿಂದಿರುಗುವುದನ್ನು ನೋಡಿದ ಕೊಕ್ಕರೆಯೊಂದು ಆನೆಯನ್ನು ಛೇಡಿಸಲು ಪ್ರಾರಂಭಿಸಿತು. ಆಗ ಆನೆ ತನಗೆ ಹೊಸ ಗೆಳೆಯ ಸಿಕ್ಕಿರುವ ವಿಷಯವನ್ನು ಕೊಕ್ಕರೆಗೆ ತಿಳಿಸಿತು. ಬಹುದಿನಗಳಿಂದ ಆ ಸುಂದರ ಮೀನಿಗಾಗಿ ಹೊಂಚು ಹಾಕುತ್ತಿದ್ದ ಕೊಕ್ಕರೆಯ ಮನದಲ್ಲಿ ಈಗ ದುರಾಸೆಯೊಂದು ಹುಟ್ಟಿಕೊಂಡಿತು. ಹೇಗಾದರೂ ಮಾಡಿ ಆ ಮೀನನ್ನು ತಿನ್ನಬೇಕು ಎಂದೆನಿಸಿತು.

ಕೂಡಲೇ ಅದು ಆನೆಗೆ ಹೇಳಿತು. ನಿನಗೆ ಹೊಸ ಸ್ನೇಹಿತ ಸಿಕ್ಕಿರುವ ವಿಚಾರವನ್ನು ಊರಿಗೆಲ್ಲ ಹೇಳಬೇಕು. ನೀನೊಂದು ಅದ್ಧೂರಿ ಕಾರ್ಯಕ್ರಮ ಮಾಡು. ಎಲ್ಲರೂ ನಿನಗೆ ಸ್ನೇಹಿತರಿಲ್ಲ ಎಂದು ತಮಾಷೆ ಮಾಡುತ್ತಿದ್ದರು. ಅವರಿಗೆ ಈ ಕಾರ್ಯಕ್ರಮದ ಮೂಲಕ ಉತ್ತರಕೊಡು ಮತ್ತು ನಿನ್ನ ಹೊಸ ಸ್ನೇಹಿತನನ್ನು ಎಲ್ಲರಿಗೂ ಪರಿಚಯಿಸು ಎಂದಿತು. ಕೊಕ್ಕರೆಯ ಒಳಸಂಚು ತಿಳಿಯದ ಆನೆ ಇದಕ್ಕೆ ಒಪ್ಪಿತು. ಕಾರ್ಯಕ್ರಮ ನಿಗದಿ ಮಾಡಿದ ಬಳಿಗೆ ನಿನ್ನನ್ನೂ ಕರೆಯುವುದಾಗಿ ಹೇಳಿ ಅಲ್ಲಿಂದ ಹೊರಟಿತು.

ಮರುದಿನ ನದಿ ದಡಕ್ಕೆ ಬಂದ ಆನೆ ಮೀನಿನ ಬಳಿ ಈ ವಿಚಾರ ತಿಳಿಸಿತು. ಅಲ್ಲದೆ ಕೊಕ್ಕರೆ ಇದನ್ನು ಹೇಳಿದ್ದಾಗಿಯೂ ಹೇಳಿತು. ಮೊದಲೇ ಕೊಕ್ಕರೆಯ ಬಗ್ಗೆ ಅನುಮಾನವಿದ್ದ ಮೀನು “ಸರಿ ನಾನು ಕಾರ್ಯಕ್ರಮಕ್ಕೆ ಬರುತ್ತೇನೆ. ಆದರೆ ಒಂದು ವಿಷಯ, ನನ್ನ ಸುತ್ತಮುತ್ತ ಸಾಕಷ್ಟು ನೀರಿರಬೇಕು ಮತ್ತು ಸಣ್ಣಪುಟ್ಟ ಕಲ್ಲುಗಳು ತುಂಬಿರಬೇಕು. ಜತೆಗೆ ಗಿಡ, ಬಳ್ಳಿಗಳು ಇರಬೇಕು. ಯಾವಾಗ ನಿನ್ನ ಪರಿಚಯದವರಿಗೆ ನಾನು ಕಾಣಿಸಿಕೊಳ್ಳಬೇಕು ಎಂದು ಬಯಸುತ್ತೇನೋ ಆಗ ಮಾತ್ರ ಕಾಣಿಸಿಕೊಳ್ಳುತ್ತೇನೆ’ ಎಂದಿತು. ಆನೆ ಇದಕ್ಕೆ ಒಪ್ಪಿತು.

Advertisement

ಮನೆಗೆ ಬಂದ ಕೂಡಲೇ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿತು. ಅಲ್ಲದೇ ಮೀನಿಗೆ ಇರಲು ಬೇಕಾದ ವ್ಯವಸ್ಥೆಯನ್ನೂ ಮಾಡಿತು. ದೊಡ್ಡದಾದ ಕೆರೆಯೊಂದನ್ನು ನಿರ್ಮಿಸಿ, ಅದರಲ್ಲಿ ಮೀನಿಗೆ ಇರಲು ವ್ಯವಸ್ಥೆಯನ್ನು ಮಾಡಿತು. ಎಷ್ಟೆಲ್ಲ ತಯಾರಿಗಳಾಗಿವೆ ಎಂಬುದನ್ನು ಆನೆ ಬಂದು ನಿತ್ಯವೂ ಮೀನಿಗೆ ಹೇಳುತ್ತಿತ್ತು. ಮೀನು ಖುಷಿಯಿಂದ ಕೇಳುತ್ತಿತ್ತು.

ಅಂತೂ ಇಂತು ನಿಗದಿಯಾದ ಕಾರ್ಯಕ್ರಮದ ದಿನ ಬಂದೇ ಬಿಟ್ಟಿತು. ಬಹಳ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಿತು. ಆನೆ, ಹುಲಿ, ಮಂಗಗಳು, ಹಾವು, ಹಕ್ಕಿಗಳು ಸೇರಿದ್ದವು. ದೂರದಿಂದ ಕೊಕ್ಕರೆಯೂ ತನ್ನ ಬಳಗದೊಂದಿಗೆ ಬಂದಿತ್ತು. ಅದು ಮೀನು ಇರುವ ಕೆರೆಯ ಬಳಿಯೇ ಬಂದು ನಿಂತಿತು. ತನ್ನ ಒಡನಾಡಿಗಳನ್ನೂ ಕೆರೆಯ ಹತ್ತಿರವೇ ನಿಲ್ಲಲು ಸೂಚಿಸಿತು.

ಆರಂಭದಲ್ಲಿ ಹಾಡು, ನೃತ್ಯ ಪ್ರದರ್ಶನಗಳು ಜರಗಿದವು. ಈ ಮಧ್ಯೆ ಕೆರೆಯಲ್ಲಿ ಹಸುರು ಬಣ್ಣದ ಹೂವೊಂದು ತೇಲುತ್ತಿರುವುದನ್ನು ನೋಡಿದ ಆನೆಗೆ ಆಶ್ಚರ್ಯವಾಯಿತು. ಹತ್ತಿರ ಬಂದು ನೋಡುವಾಗ ಮೀನು ಸೂಚನೆ ಕೊಟ್ಟಿತು. ಕೂಡಲೇ ಆನೆ ಮೈಕ್‌ನ ಬಳಿ ಬಂದು ಈಗ ನನ್ನ ಹೊಸ ಸ್ನೇಹಿತನ ಪರಿಚಯ ಮಾಡಿಕೊಡುತ್ತೇನೆ ಎಂದಾಗ ಕೊಕ್ಕರೆಗಳು ನೋಡನೋಡುತ್ತಿದ್ದಂತೆ ಮೀನು ಆಕಾಶದೆತ್ತರಕ್ಕೆ ಹಾರಿ ಎಲ್ಲರಿಗೂ ನೀರನ್ನು ಚಿಮುಕಿಸಿ ಕೆರೆಯೊಳಗೆ ಮರೆಯಾಯಿತು. ಹೀಗೆ ಐದು ಆರು ಬಾರಿ ಮಾಡಿ ಎತ್ತರದಲ್ಲಿದ್ದ ನೀರಿನ ಬಾಟಲಿಗೆ ಹಾರಿ ಕುಳಿತು ಎಲ್ಲರಿಗೂ ಹಾಯ್‌ ಹಲೋ ಹೇಳಿ ಮತ್ತೆ ಕೆರೆಯ ಆಳಕ್ಕೆ ಜಿಗಿಯಿತು. ಏನೇ ಮಾಡಿದರೂ ಕೊಕ್ಕರೆಗಳಿಗೆ ಮೀನನ್ನು ಹಿಡಿಯಲಾಗಲಿಲ್ಲ.

ಕೊನೆಗೆ ಊಟಕ್ಕೆ ಕುಳಿತಿದ್ದಾಗ ಆನೆಯ ಬಳಿ ಬಂದ ಕೊಕ್ಕರೆ ನನ್ನನ್ನು ನಿನ್ನ ಹೊಸ ಸ್ನೇಹಿತನಿಗೆ ಪರಿಚಯಿಸುವುದಿಲ್ಲವೇ ಎಂದಿತು. ಕೂಡಲೇ ಆನೆ ಅತ್ಯುತ್ಸಾಹದಿಂದ ಕೆರೆಯ ಬಳಿ ಬಂದು ಮೀನನ್ನು ಕರೆಯಿತು. ಬಳ್ಳಿಯ ಎಡೆಯಲ್ಲಿ ಕುಳಿತಿದ್ದ ಮೀನು ಅಲ್ಲೇ ಕಣ್ಣು ಮಿಟುಕಿಸಿ ಏನು ಎನ್ನುವಂತೆ ಕೇಳಿತು. ಆಗ ಕೊಕ್ಕರೆಯನ್ನು ಆನೆ ಪರಿಚಯಿಸಿತು. ಆಗ ಕೊಕ್ಕರೆ ನೀವು ಸರಿಯಾಗಿ ನನಗೆ ಕಾಣುತ್ತಿಲ್ಲ, ಸ್ವಲ್ಪ ಮುಂದೆ ಬನ್ನಿ ಎಂದಿತು. ಅಷ್ಟರಲ್ಲಿ ಆನೆಯನ್ನು ಇನ್ಯಾರೋ ಕರೆದರು. ಆನೆ ನೀವಿಬ್ಬರು ಮಾತನಾಡಿಕೊಳ್ಳಿ ಎಂದು ಹೇಳಿ ಹೋಯಿತು.

ಆಗ ಮೀನು ನಿನ್ನ ಸಂಚಿನ ಅರಿವು ನನಗಿದೆ. ಮರ್ಯಾದೆಯಾಗಿ ಇಲ್ಲಿಂದ ಹೊರಟು ಹೋಗು. ಆನೆಯ ಸ್ನೇಹಕ್ಕೆ ಕಟ್ಟು ಬಿದ್ದು ನಾನಿಲ್ಲಿಗೆ ಬಂದಿದ್ದೇನೆ. ಇಲ್ಲವಾದರೆ ನಿನ್ನ ಸಂಚನ್ನು ಆನೆಗೆ ಹೇಳುತ್ತೇನೆ ಎಂದಿತು. ಆಗ ಕೊಕ್ಕರೆ ಆಕ್ರೋಶದಿಂದ ಮೀನನ್ನು ಕುಕ್ಕಲು ಹೋಯಿತು. ಆಗ ಮೀನು ಬಳ್ಳಿಯ ಒಳಗೊಳಗೆ ನುಸುಳಿ ತಪ್ಪಿಸಿಕೊಂಡಿತು. ಇದನ್ನು ದೂರದಿಂದ ನೋಡಿದ ಆನೆ ಕೊಕ್ಕರೆಗೆ ತನ್ನ ಬಲವಾದ ಸೊಂಡಿಲಿನಿಂದ ಒಂದೇಟು ಹೊಡೆಯಿತು. ಅಷ್ಟರಲ್ಲಿ ಮೀನು ಆನೆಯ ಬಳಿ ಬಂದು ಎಲ್ಲ ವಿಷಯವನ್ನು ಹೇಳಿತು.

ಕೂಡಲೇ ಆನೆ, ಕೊಕ್ಕರೆಗಳಿಗೆ ನೀವೆಲ್ಲ ಸ್ನೇಹಕ್ಕೆ ಯೋಗ್ಯರಲ್ಲ. ಹೊರಟು ಹೋಗಿ ಎಂದು ಎಲ್ಲ ಕೊಕ್ಕರೆಗಳನ್ನು ಸೊಂಡಿಲಿನಿಂದ ಹೊಡೆದು ಓಡಿಸಿತು. ಅಲ್ಲೇ ಇದ್ದ ಇತರ ಪ್ರಾಣಿಗಳೂ ಕೊಕ್ಕರೆಗಳನ್ನು ಹೀಯಾಳಿಸಿದವು. ಎಲ್ಲರೆದುರು ಅವಮಾನಗೊಂಡ ಕೊಕ್ಕರೆಗಳು ಅಲ್ಲಿಂದ ಹೊರಟುಹೋದವು.

ಬಳಿಕ ದುಃಖೀಸುತ್ತ ಮೀನಿನ ಬಳಿಗೆ ಬಂದ ಆನೆ, ಕೊಕ್ಕರೆಯ ವಂಚನೆಯ ಅರಿವಿಲ್ಲದೆ ಹೀಗೆ ಮಾಡಿದೆ. ನನ್ನನ್ನು ಕ್ಷಮಿಸು ಎಂದಿತು. ಆಗ ಮೀನು ಈ ಬಗ್ಗೆ ನನಗೆ ಮೊದಲೇ ಗೊತ್ತಿದ್ದರಿಂದ ಈ ರೀತಿಯ ವ್ಯವಸ್ಥೆಯನ್ನು ಮಾಡಲು ಹೇಳಿದ್ದೆ. ಇದರಲ್ಲಿ ನಿನ್ನದೇನೂ ತಪ್ಪಿಲ್ಲ. ನೀನು ನನ್ನ ಹಾಗೆ ಕೊಕ್ಕರೆಯೂ ನಿನ್ನ ಸ್ನೇಹಿತನಾದ ಎಂದುಕೊಂಡಿದ್ದೆ. ನಾನು ಕೂಡ ಮೊದಲು ಅದು ಬದಲಾಗಿರಬಹುದು ಎಂದುಕೊಂಡೆ. ಆದರೆ ಮುಂಜಾಗ್ರತಾ ಕ್ರಮವಾಗಿ ನನ್ನ ಸುರಕ್ಷೆಯನ್ನು ನಾನು ಮಾಡಿದ್ದರಿಂದ ಇವತ್ತು ಕೊಕ್ಕರೆಯ ನಿಜ ಬಣ್ಣ ಎಲ್ಲರಿಗೂ ತಿಳಿಯಿತು ಎಂದಿತು. ಆಗ ಆನೆ, ನನ್ನದೂ ತಪ್ಪಿದೆ. ಹಿಂದುಮುಂದು ಯೋಚಿಸದೆ ಕೊಕ್ಕರೆಯನ್ನು ಸ್ನೇಹಿತನಾಗಿ ಮಾಡಿಕೊಂಡೆ. ಅದರ ಪರಿಣಾಮ ನೀನು ಎದುರಿಸಬೇಕಾಯಿತು ಎಂದು ಮತ್ತೆ ದುಃಖೀಸತೊಡಗಿತು. ಮೀನು ಆನೆಯನ್ನು ಸಮಾಧಾನ ಪಡಿಸಿ, ಊಟ ಮುಗಿಸಿ, ತನ್ನನ್ನು ಮರಳಿ ನದಿಗೆ ಬಿಟ್ಟು ಬರುವಂತೆ ಆನೆಗೆ ಹೇಳಿತು. ಕೂಡಲೇ ಆನೆಯು ಮೀನನ್ನು ಕರೆದುಕೊಂಡು ಹೋಗಿ ನದಿಗೆ ಬಿಟ್ಟಿತು. ಇದರಿಂದ ಆನೆಗೂ ಕೊಂಚ ಸಮಾಧಾನವಾಗಿತ್ತು.

ಮರುದಿನದಿಂದ ಸುತ್ತಮುತ್ತ ಎಲ್ಲೂ ಕೊಕ್ಕರೆಗಳು ಕಾಣಿಸಿಕೊಳ್ಳಲಿಲ್ಲ. ಹಿಂದಿನ ದಿನ ಆದ ಅವಮಾನ ತಾಳಲಾರದೆ ಅವುಗಳು ಪಕ್ಕದ ಕಾಡಿಗೆ ವಲಸೆ ಹೋಗಿದ್ದವು. ಇದರಿಂದ ಆನೆಗೂ ಕೊಂಚ ಸಮಾಧಾನವಾಯಿತು. ಮತ್ತೆ ಎಂದಿನಂತೆ ಮೀನಿನೊಂದಿಗೆ ತನ್ನ ಒಡನಾಟವನ್ನು ಇರಿಸಿಕೊಂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next