ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವು ಕಾರ್ಯಚರಣೆ ಹಲವು ವರ್ಷಗಳಿಂದ ಸಮರ್ಪಕವಾಗಿ ನಡೆಯದೇ ನೆನಗುದಿಗೆ ಬಿದ್ದಿದ್ದು, ಜಿಲ್ಲಾದ್ಯಂತ ಒಟ್ಟು 800 ಎಕರೆ ಸರ್ಕಾರಿ ಭೂಮಿ ಇನ್ನೂ ಭೂಗಳ್ಳರ ವಶದಲ್ಲಿದ್ದು ತೆರವಿಗಾಗಿ ಎದುರು ನೋಡುತ್ತಿದೆ.
ಜಿಲ್ಲೆಯಲ್ಲಿ ಬಗರ ಹುಕುಂ ಯೋಜನೆಯಡಿ ಸರ್ಕಾರಿ ಜಮೀನು ಅಕ್ರಮ ಮಂಜೂರಾತಿ ಪ್ರಕರಣಗಳು ನಡೆದಿರುವ ಬಗ್ಗೆ ಇತ್ತೀಚೆಗೆ ಕಂದಾಯ ಸಚಿವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ ಜಿಲ್ಲಾಡಳಿತವೇ ಸರ್ಕಾರಿ ಜಮೀನು ಒತ್ತುವರಿ ಆಗಿರುವುದನ್ನು ಪತ್ತೆ ಮಾಡಿದರೂ, ಅದರ ತೆರವು ಕಾರ್ಯಕ್ಕೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯಲ್ಲಿ ಬರೋಬ್ಬರಿ 3,70,415.25 ಎಕರೆಯಷ್ಟು ಸರ್ಕಾರಿ ಭೂಮಿ ಇದ್ದು, ಆ ಪೈಕಿ 61,995.30 ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಒತ್ತುವರಿ ಜಮೀನಲ್ಲಿ 52,424.16 ಎಕೆರೆಯಷ್ಟು ಜಮೀನು ಫಾರಂ 50, 53 ಹಾಗೂ 94ಸಿ ಮೂಲಕ ತಾವು ಸಾಗುವಳಿ ಮಾಡುತ್ತಿರುವುದಕ್ಕೆ ಹಕ್ಕು ಪತ್ರ ನೀಡುವಂತೆ ರೈತರು ಅರ್ಜಿ ಸಲ್ಲಿಸಿಕೊಂಡಿದ್ದಾರೆ. ಇನ್ನೂ ಸುಮಾರು 192 ಎಕರೆ ಸರ್ಕಾರಿ ಭೂಮಿ ಹಕ್ಕುದಾರಿಕೆ ವಿಚಾರದಲ್ಲಿ ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿರುವ ಪ್ರಕರಣಗಳು ಇವೆ. ಉಳಿದಂತೆ ಜಿಲ್ಲೆಯಲ್ಲಿ 9,379 ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿ ಆಗಿದ್ದು, ಆ ಪೈಕಿ ಜಿಲ್ಲಾಡಳಿತ ಇಲ್ಲಿವರೆಗೂ 8,578 ಎಕರೆ ಜಮೀನನ್ನು ಒತ್ತುವರಿ ತೆರವುಗೊಳಿಸಲಾಗಿದೆ. ಆದರೆ ಉಳಿದ 800 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯ ಪ್ರಗತಿ ಕಾಣದೇ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹಾಗೆ ಭೂಗಳ್ಳರ ವಶದಲ್ಲಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಚಿಂತಾಮಣಿಯಲ್ಲಿ 651 ಎಕರೆ ಭೂ ಒತ್ತುವರಿ!:
ವಿಶೇಷ ಅಂದರೆ ಇಡೀ ಜಿಲ್ಲೆಯಲ್ಲಿ 800 ಎಕರೆ ಸರ್ಕಾರಿ ಭೂಮಿ ಒತ್ತುವರಿ ಆಗಿದ್ದರೆ ಅದರಲ್ಲಿ 651 ಎಕರೆಯನ್ನು ಕೋಟ್ಯಾಂತರ ರೂ. ಬೆಲೆ ಬಾಳುವ ಜಮೀನು ಭೂಗಳ್ಳರ ವಶದಲ್ಲಿಯೆ ಉಳಿದುಕೊಂಡಿದೆ. ಇಲ್ಲಿವರೆಗೂ ಚಿಂತಾಮಣಿ ಯಲ್ಲಿ 2,561 ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿ ಪೈಕಿ 1,910.21 ಎಕರೆಯಷ್ಟು ತೆರವು ಮಾಡಲಾಗಿದ್ದು ಇನ್ನೂ 651 ಎಕೆರೆ ಬಾಕಿದೆ. ಉಳಿದಂತೆ 149.19 ಎಕರೆ ಶಿಡ್ಲಘಟ್ಟ ತಾಲೂಕಿನಲ್ಲಿ ಒತ್ತುವರಿ ತೆರವು ಬಾಕಿ ಇದೆ.
ಭೂ ಅಕ್ರಮ ಮಂಜೂರಾತಿ ತನಿಖೆ ನಡೆಯುತ್ತಾ?:
ಇತ್ತೀಚೆಗೆ ಕಂದಾಯ ಸಚಿವರು ಜಿಲ್ಲೆಗೆ ಆಗಮಿಸಿದ್ದ ವೇಳೆ ಬಗರ್ ಹುಕ್ಕುಂ ಸಾಗುವಳಿ ಚೀಟಿಗಳ ವಿತರಣೆಯಲ್ಲಿ ಸಾಕಷ್ಟು ಅಕ್ರಮಗಳು ಆಗಿ ಕೆಲವರಿಗೆ ಭೂಗಸ್ ಸಾಗುವಳಿ ಚೀಟಿಗಳನ್ನು ವಿತರಿಸುವ ಮೂಲಕ ಅಕ್ರಮವಾಗಿ ಭೂ ಮಂಜೂರಾತಿ ಮಾಡಲಾಗಿದೆಯೆಂದು ಹೇಳಿದ್ದರು. ಸಹಜವಾಗಿಯೆ ಬಗರ್ ಹುಕುಂ ಸಮಿತಿಗಳು ಆಯಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ರಚನೆ ಆಗಿರುತ್ತವೆ. ಹೀಗಾಗಿ ಬಾಗೇಪಲ್ಲಿ, ಚಿಂತಾಮಣಿ ಕ್ಷೇತ್ರಗಳಲ್ಲಿ ನಡೆದಿರುವ ಭೂ ಅಕ್ರಮ ಮಂಜೂರಾತಿ ಪ್ರಕರಣಗಳ ಹಿಂದೆ ಯಾರಿದ್ದಾರೆ? ಶಾಸಕರ ಕೈವಾಡ ಇದೇಯಾ ಅಥವಾ ಅಧಿಕಾರಿಗಳ ಕೈವಾಡನಾ ಎನ್ನುವ ಕುತೂಹಲ ಸಾರ್ವಜನಿಕ ವಲಯದಲ್ಲಿ ಎದ್ದಿದ್ದು, ಈ ನಿಟ್ಟಿನಲ್ಲಿ ಕಂದಾಯ ಸಚಿವರ ಸೂಚನೆಯಂತೆ ಜಿಲ್ಲಾಡಳಿತ ಅಕ್ರಮ ತನಿಖೆ ನಡೆಸುತ್ತಾ? ಅಕ್ರಮ ಭೂ ಮಂಜೂರಾತಿಯನ್ನು ಪತ್ತೆ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
-ಕಾಗತಿ ನಾಗರಾಜಪ್ಪ