Advertisement
ಸಾರ್ವಜನಿಕ ಒತ್ತಾಯಶುಕ್ರವಾರ ಕಂಬ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಚರಂಡಿಯಲ್ಲಿ ಕಂಬಗಳನ್ನು ಅಳವಡಿಸಿದ್ದರಿಂದ ಲೋಕೋಪಯೋಗಿ ರಸ್ತೆಯ ಚರಂಡಿ ಬ್ಲಾಕ್ ಆಗುವ ಸಾಧ್ಯತೆಯ ಕುರಿತು ಮತ್ತು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿರುವವುದರಿಂದ ರಸ್ತೆ ಬದಿಯ ಚರಂಡಿಯಲ್ಲಿರುವ ವಿದ್ಯುತ್ ಕಂಬ ತೆರವುಗೊಳಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತ್ತು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ಉಪವಿಭಾಗದ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಮೋದ್ ಅವರ ಸೂಚನೆ ಮೇರೆಗೆ ರಸ್ತೆ ಮೇಲ್ವಿಚಾರಕ ಲಿಂಗಪ್ಪ ಅವರು ಕಂಬ ಅಳವಡಿಸಿದ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂತರದಲ್ಲಿ ಚರಂಡಿ ಮೇಲಿರುವ ಹಾಗೂ ರಸ್ತೆ ಬದಿಯಲ್ಲಿರುವ ಕಂಬಗಳನ್ನು ತೆರವು ಮಾಡುವಂತೆ ವಿದ್ಯುತ್ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಸವಣೂರು ಮೆಸ್ಕಾಂ ಜೆಇ ನಾಗರಾಜ್ ಕೆ., ಬೆಳಂದೂರು ಗ್ರಾ.ಪಂ.ಅಧ್ಯಕ್ಷೆ ಉಮೇಶ್ವರಿ ಅಗಳಿ, ಉಪಾಧ್ಯಕ್ಷ ಹರೀಶ್ ಕೆರೆನಾರು, ಸವಣೂರು ಗ್ರಾ.ಪಂ. ಸದಸ್ಯರಾದ ಸತೀಶ್ ಬಲ್ಯಾಯ, ಎಂ.ಎ. ರಫೀಕ್ ಉಪಸ್ಥಿತರಿದ್ದರು. ಎರಡೆರಡು ಬಾರಿ ‘ಸುದಿನ’ ವರದಿ ಪ್ರಕಟ
ಸಾರ್ವಜನಿಕ ಸಮಸ್ಯೆಯ ಹಿನ್ನೆಲೆಯಲ್ಲಿ ‘ಉದಯವಾಣಿ’ ಸುದಿನ ಅ.4ರಂದು ಸಚಿತ್ರ ವರದಿ ಪ್ರಕಟಿಸಿತ್ತು. ಮಾತ್ರವಲ್ಲದೆ ಪುತ್ತೂರು ತಾ.ಪಂ. ಕೆಡಿಪಿ ಸಭೆ ಹಾಗೂ ಶಾಸಕರ ಜನಸಂಪರ್ಕ ಸಭೆಯಲ್ಲೂ ಈ ವಿಚಾರ ಪ್ರಸ್ತಾವವಾಗಿತ್ತು. ಕಂಬ ತೆರವುಗೊಳಿಸುವಂತೆ ಶಾಸಕ ಸಂಜೀವ ಮಠಂದೂರು ಅವರು ಮೆಸ್ಕಾಂಗೆ ಸೂಚಿಸಿದ್ದರು. ಈ ವಿಚಾರದ ಕುರಿತು ಇಷ್ಟೆಲ್ಲ ಬೆಳವಣಿಗೆಯಾಗಿದ್ದರೂ, ಕಂಬಗಳನ್ನು ತೆರವುಗೊಳಿಸುವ ಬದಲು ಕಂಬಕ್ಕೆ ತಂತಿ ಅಳವಡಿಸುವ ಕಾರ್ಯ ನಡೆಸಲಾಗಿತ್ತು. ಈ ಕುರಿತು ‘ಉದಯವಾಣಿ’ ಸುದಿನ ಅ. 10ರಂದು ಫಾಲೋಅಪ್ ವರದಿಯನ್ನು ಪ್ರಕಟಿಸಿತ್ತು.