ಬಾಗಲಕೋಟೆ: ನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಜೆಸಿಬಿಗಳು ಗರ್ಜಿಸಿದ್ದು, ನಗರದ ಮುಳಗಡೆ ಪ್ರದೇಶದಲ್ಲಿನ ಶೆಡ್‌ಗಳನ್ನು ತೆರವುಗೊಳಿಸಲಾಯಿತು. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ತೀವ್ರ ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭಗಳಲ್ಲಿ ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ ಹಾಗೂ ಬಿಟಿಡಿಎ ಅಧಿಕಾರಿಗಳ ಕಾರ್ಯಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹಳೆಯ ಅಂಜುಮನ್ ಸಂಸ್ಥೆಯ ಏರಿಯಾ, ಕಿಲ್ಲಾ ಪ್ರದೇಶಗಳಲ್ಲಿ ಇದ್ದ ಶೆಡ್ ಗಳನ್ನು ನಗರಸಭೆ, ಬಿಟಿಡಿಎ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು. ಈ ವೇಳೆ ಶೆಡ್‌ನಲ್ಲಿದ್ದ ಮಹಿಳೆಯರು, ಅಧಿಕಾರಿಗಳಿಗೆ ಕೈ ಮುಗಿದು, ಶೆಡ್ ನಾವು ತೆಗೆದುಕೊಳ್ಳುತ್ತೇವೆ. ಜೆಸಿಬಿ ಮೂಲಕ ಹಾಳು ಮಾಡಬೇಡಿ ಎಂದು ಕೇಳಿಕೊಂಡರು.
ಕೈ ಮುಗಿದು ಕೇಳಿಕೊಂಡರೂ ಕರಗದ ಅಧಿಕಾರಿಗಳು, ಹಲವು ಶೆಡ್‌ಗಳನ್ನು ನೆಲಸಮಗೊಳಿಸಿದರು. ಈ ವೇಳೆ ಕೆಲ ಮಹಿಳೆಯರು ಕಣ್ಣೀರು ಹಾಕಿದರು. ಅಲ್ಲದೇ ಕೊರೊನಾ ಸಂಕಷ್ಟದಲ್ಲಿರುವ ಬಡ ಜನರಿಗೆ ಅಧಿಕಾರಿಗಳು ಈ ರೀತಿ ತೊಂದರೆ ಕೊಡುತ್ತಿರುವುದಕ್ಕೆ ಹಿಡಿಶಾಪ ಹಾಕಿದರು .
ಸದ್ಯ ಅತಿಕ್ರಮಣ ತೆರವುಗೊಳಿಸಿದ ಪ್ರದೇಶ, ಬಿಟಿಡಿಎದಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇಲ್ಲಿನ ಕಟ್ಟಡಕ್ಕೆ ಪರಿಹಾರ ನೀಡುವ ಜತೆಗೆ ನವನಗರದಲ್ಲಿ ಬಿಟಿಡಿಎದಿಂದ ನಿವೇಶನ ಕೂಡ ನೀಡಲಾಗಿದೆ. ಆದರೂ, ನವನಗರದಲ್ಲಿ ಮನೆ ಕಟ್ಟಿಕೊಂಡ ಕೆಲವರು, ಅದನ್ನು ಬಾಡಿಗೆ ಕೊಟ್ಟು, ಹಳೆಯ ನಗರದ ಮುಳುಗಡೆ ಪ್ರದೇಶದಲ್ಲಿ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ. ಅವರೆಲ್ಲ ನವನಗರಕ್ಕೆ ಸ್ಥಳಾಂತರಗೊಳ್ಳಲಿ, ಮಳೆಗಾಲ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿನ್ನೀರ ಪ್ರದೇಶ ಆವರಿಸಿಕೊಳ್ಳುತ್ತದೆ. ಹೀಗಾಗಿ ಅವರ ಆರೋಗ್ಯ ಹಿತದೃಷ್ಟಿಯ ಜತೆಗೆ ಅವರು ನವನಗರಕ್ಕೆ ಸ್ಥಳಾಂತರಗೊಳ್ಳಲಿ ಎಂಬ ಉದ್ದೇಶದಿಂದ ತೆರವುಗೊಳಿಸಲಾಗಿದೆ. ಈ ಕುರಿತು ಸಾಕಷ್ಟು ಬಾರಿ ಅವರಿಗೆ ಸೂಚನೆ ನೀಡಿದರೂ, ತೆರವುಗೊಳಿಸಿರಲಿಲ್ಲ. ಹೀಗಾಗಿ ನಾವೇ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಾಯಿತು ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ.