ಕಾರಟಗಿ: ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಸಮುದಾಯಗಳ ಪ್ರತಿಷ್ಠೆ, ವಿವಾದಕ್ಕೆ ಕಾರಣವಾದ ಮಹನೀಯರ, ಮಹಾಪುರುಷರ ಎಲ್ಲ ನಾಮಫಲಕಗಳನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್. ಮೋಹನ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಂದಿಹಳ್ಳಿ ಗ್ರಾಮದಲ್ಲಿ ನಡೆದ ಸಂಧಾನ ಸಭೆಯಲ್ಲಿ ಒಂದು ವರ್ಷದಿಂದಲೂ ನಾಮಫಲಕಗಳ ಪ್ರತಿಷ್ಠಾಪಿಸುವ ಸಂಬಂಧ ಉಂಟಾದ ಪ್ರತಿಷ್ಠೆಯೆ ಇತ್ತೀಚೆಗೆ ನಡೆದ ಮಾರಾಮಾರಿಗೆ, ಘರ್ಷಣೆಗೆ ಕಾರಣಗಳಲ್ಲೊಂದಾಗಿತ್ತು. ಈ ವಿಷಯ ಸಭೆಯಲ್ಲಿ ಗಮನಕ್ಕೆ ಬರುತ್ತಿದ್ದಂತೆ ಘರ್ಷಣೆಗೆ ಕಾರಣವಾದ ಯಾವೊಂದು ನಾಮಫಲಕಗಳು ಗ್ರಾಮದಲ್ಲಿ ಇರಬಾರದು, ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳದಲ್ಲಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆ ಮುಕ್ತಾಯವಾಗುತ್ತಿದ್ದಂತೆ ಪೊಲೀಸರ ನೆರವಿನೊಂದಿಗೆ ಕಾರ್ಯ ಪ್ರವೃತ್ತರಾದ ಇಒ ವಿವಾದಾತ್ಮಕ ಮಹರ್ಷಿ ವಾಲ್ಮೀಕಿ ಹಾಗೂ ಡಾ| ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕಗಳನ್ನು ಜೆಸಿಬಿ ನೆರವಿನೊಂದಿಗೆ ಕಟ್ಟೆ ಸಮೇತ ತೆರವುಗೊಳಿಸಿದರು.
ನಂತರ ಗ್ರಾಮದ ಇನ್ನಿತರ ಕಡೆ ಪ್ರತಿಷ್ಠಾಪಿಸಲಾಗಿದ್ದ ದಾಸಶ್ರೇಷ್ಠ ಕನಕದಾಸರ ನಾಮಫಲಕ ಹಾಗೂ ಕರ್ನಾಟಕ ರತ್ನ ಡಾ| ಪುನೀತ್ ರಾಜಕುಮಾರ್ ಅವರ ನಾಮಫಲಕಗಳನ್ನೂ ಕೂಡ ಇದೇ ಸಂದರ್ಭದಲ್ಲಿ ತೆರವುಗೊಳಿಸಲಾಯಿತು.
ತೆರವು ಕಾರ್ಯಾಚರಣೆ ನೇತೃತ್ವವಹಿಸಿದ್ದ ಇಒ ಡಾ| ಮೋಹನ್ ಮಾತನಾಡಿ, ಪ್ರತಿ ನಗರ, ಪಟ್ಟಣ, ಗ್ರಾಮಗಳಲ್ಲಿ ಆದರ್ಶ ಪುರುಷರ ನಾಮಫಲಕ ಹಾಕುವುದು ಸರ್ವೇ ಸಾಮಾನ್ಯ. ಆದರೆ ಅದೇ ನಾಮಫಲಕ ಪ್ರತಿಷ್ಠೆಗೆ ಕಾರಣವಾಗಿ ಆಯಾ ನಗರ, ಪಟ್ಟಣ ಗ್ರಾಮಗಳ ಜನತೆಯ ಶಾಂತಿ, ನೆಮ್ಮದಿಗೆ ಭಂಗ ತರುವಂತಾದರೆ ಹೇಗೆ. ಇದು ಶಾಂತಿ, ಸಾಮಾರಸ್ಯ, ಸೌಹಾರ್ದತೆಯನ್ನು ಜಗತ್ತಿಗೆ ಬೋಧಿಸಿದ ಮಹಾಪುರುಷರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ. ಆ ಕಾರಣಕ್ಕೆ ಜಿಲ್ಲಾಧಿಕಾರಿಗಳು ಕಟ್ಟೆ, ನಾಮಫಲಕಗಳನ್ನು ಮೊದಲು ತೆರವುಗೊಳಿಸುವಂತೆ ಸೂಚಿಸಿದ್ದೆ. ಗ್ರಾಮದಲ್ಲಿನ ಎಲ್ಲ ವಿವಾದಾತ್ಮಕ ನಾಮಫಲಕಗಳನ್ನು ತೆರವುಗೊಳಿಸಬೇಕಾಗಿ ಬಂತು ಎಂದು ತಿಳಿಸಿದರು.
ಭೇಟಿ: ಸಪಾಯಿ ಕರ್ಮಚಾರಿ ನಿಗಮದ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ಅವರು ನಂದಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಘರ್ಷಣೆಗೆ ಒಳಗಾಗಿ ತೊಂದರೆಗೀಡಾಗಿರುವ ಎಲ್ಲ ಸಂತ್ರಸ್ತರಿಗೆ ನಿಗಮದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.