Advertisement

ಅತಿಕ್ರಮಣ; 60ಕ್ಕೂ ಅಧಿಕ ಮನೆ-ಅಂಗಡಿಗಳ ತೆರವು

10:56 AM Jun 15, 2020 | Suhan S |

ಹುಬ್ಬಳ್ಳಿ: ಇಲ್ಲಿನ ಅಮರಗೋಳದಲ್ಲಿ ಅಮರಗೋಳ- ಅಮ್ಮಿನಭಾವಿ ರಾಜ್ಯ ಹೆದ್ದಾರಿ 73ರಲ್ಲಿ ಅತಿಕ್ರಮಣಗೊಂಡಿದ್ದ ಜಾಗೆ ತೆರವುಗೊಳಿಸುವ ಕಾರ್ಯಾಚರಣೆ ಎರಡು ವರ್ಷಗಳ ನಂತರ ರವಿವಾರ ಬೆಳಗಿನ ಜಾವ ಸುಸೂತ್ರವಾಗಿ ನಡೆಯಿತು.

Advertisement

ಲೋಕೋಪಯೋಗಿ ಇಲಾಖೆಗೆ ಸೇರಿದ ಜಿಲ್ಲಾ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ, ಹು-ಧಾ ಮಹಾನಗರ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಸಹಯೋಗದೊಂದಿಗೆ ಸುಮಾರು ಆರು ಜೆಸಿಬಿ ಯಂತ್ರಗಳ ಮೂಲಕ ರಸ್ತೆ ಅತಿಕ್ರಮಣ ಮಾಡಿನಿರ್ಮಿಸಲಾಗಿದ್ದ 60ಕ್ಕೂ ಅಧಿಕ ಮನೆ, ಅಂಗಡಿಗಳನ್ನು ತೆರವು ಮಾಡಲಾಯಿತು.

ತೆರವು ಕಾರ್ಯಾಚರಣೆ ವೇಳೆ ಕೆಲವರು ಮಳೆಗಾಲದಲ್ಲಿ ತೆರವು ಮಾಡುವುದು ಬೇಡವೆಂದು ಆಕ್ಷೇಪಣೆ ವ್ಯಕ್ತಪಡಿಸಿ ಕಾರ್ಯಾಚರಣೆ ವಿರೋಧಿಸಿದರು. ಆಗಅಧಿಕಾರಿಗಳು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ ನಂತರ ತೆರವು ಕಾರ್ಯಾಚರಣೆ ಮುಂದುವರಿಸಲಾಯಿತು.

ಅಮರಗೋಳ-ಅಮ್ಮಿನಭಾವಿ ಜಿಲ್ಲಾ ಮುಖ್ಯರಸ್ತೆಯ ಅಮರಗೋಳ ಮುಖ್ಯ ರಸ್ತೆಯ ಎರಡು ಬದಿ ಸುಮಾರು 400 ಮೀಟರ್‌ ವರೆಗೆ ಅತಿಕ್ರಮಣ ಮಾಡಿ ಮನೆ, ಅಂಗಡಿ ಹಾಗೂ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಿದ್ದರಿಂದ ರಸ್ತೆ 3.5 ಮೀಟರ್‌ನಷ್ಟಾಗಿ ಇಕ್ಕಟ್ಟಾಗಿತ್ತು. ಇದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳು ರಸ್ತೆಯನ್ನು 15ಮೀಟರ್‌ ರಸ್ತೆಯನ್ನಾಗಿ ವಿಸ್ತರಿಸಲು ಮುಂದಾಗಿದ್ದರು. ಅದಕ್ಕಾಗಿ ಅತಿಕ್ರಮಿತ ಜಾಗ ಗುರುತಿಸಿ ಮಾರ್ಕ್‌ ಮಾಡಿದ್ದರು.ಇದರ ತೆರವು ಕಾರ್ಯಾಚರಣೆ ಕಳೆದ ಎರಡು ವರ್ಷಗಳಿಂದ ಹಾಗೆ ಬಾಕಿ ಉಳಿದಿತ್ತು.

ಶನಿವಾರ ಅಧಿಕಾರಿಗಳು ರಸ್ತೆ ಮಧ್ಯೆ ಭಾಗದಿಂದ ಬಲ ಭಾಗ 7.5  ಮೀಟರ್‌ ಹಾಗೂ ಎಡಭಾಗ 7.5 ಮೀಟರ್‌ ಗುರುತು ಹಾಕಿದ್ದರು. ರವಿವಾರ ಬೆಳಗ್ಗೆ ಪೊಲೀಸ್‌ ಬಂದೋಬಸ್ತ್ನೊಂದಿಗೆ ತೆರವು ಕಾರ್ಯಾಚರಣೆಗೆ ಮುಂದಾಗಿ ಸಂಜೆವರೆಗೆ ಪೂರ್ಣಗೊಳಿಸಿದರು. ಈ ವೇಳೆ ರಸ್ತೆ ಅತಿಕ್ರಮಿಸಿ ನಿರ್ಮಿಸಲಾಗಿದ್ದ ಕೆಲವು ಮನೆ, ಅಂಗಡಿಗಳು ಶೇ.50ಕ್ಕೂ ಅಧಿಕ ಭಾಗ ಹಾಗೂ ಧಾರ್ಮಿಕ ಕೇಂದ್ರ ಸೇರಿದಂತೆ ಕೆಲ ಮನೆ, ಅಂಗಡಿಗಳ ಭಾಗಶಃ ಭಾಗ ತೆರವುಗೊಳಿಸಲಾಯಿತು.

Advertisement

ಕೆಲವರು ಶನಿವಾರವೇ ತಮ್ಮ ಮನೆಗಳಲ್ಲಿನ ಸಾಮಗ್ರಿ ತೆರವು ಮಾಡಿಕೊಂಡಿದ್ದರು. ಇನ್ನು ಕೆಲವರು ಹಾಗೆ ಬಿಟ್ಟಿದ್ದರು. ಅವರೆಲ್ಲ ರವಿವಾರ ಬೆಳಗ್ಗೆ ತೆಗೆದುಕೊಳ್ಳಲು ಮುಂದಾದರು. ಕೆಲವರು ಹಾಗೆ ಬಿಟ್ಟಿದ್ದರಿಂದ ಅವುಗಳನ್ನೆಲ್ಲ ಜೆಸಿಬಿ ಯಂತ್ರಗಳಿಂದ ತೆರವು ಮಾಡಲಾಯಿತು. ಕಾರ್ಯಾಚರಣೆ ವೇಳೆ ಮನೆ, ಅಂಗಡಿ ತೆರವು ಆದ ಸುಮಾರು 95 ಫಲಾನುಭವಿಗಳಿಗೆ ಅಮರಗೋಳದ ಆಶ್ರಯ ಕಾಲೋನಿಯಲ್ಲಿ ಪರಿಹಾರಾರ್ಥವಾಗಿ ಒಂದು ನಿವೇಶನ ಹಾಗೂ ಅವಶ್ಯವುಳ್ಳವರಿಗೆ ರಾಜೀವ ಗಾಂಧಿ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಳ್ಳಲು 2.75ಲಕ್ಷ ರೂ.ಹಣದ ಅವಕಾಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿ ಆಶ್ರಯ ಸಮಿತಿ ಸಭೆಯಲ್ಲಿ ಠರಾವು ಪಾಸ್‌ ಮಾಡಲಾಗಿತ್ತು. ಕಾರ್ಯಾಚರಣೆ ಸಂದರ್ಭದಲ್ಲಿ ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಹಾಗೂ ಸಿಬ್ಬಂದಿ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಡಿಸಿಪಿ ಆರ್‌.ಬಿ. ಬಸರಗಿ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next