ಗದಗ: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಹಿಂದೂ ದೇವಾಲಯವೊಂದನ್ನು ತೆರವುಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆಯೇ ಗದಗ ಜಿಲ್ಲೆಯಲ್ಲಿ ಸದ್ದುಗದ್ದಲವಿಲ್ಲದೇ 242 ಧಾರ್ಮಿಕ ಕೇಂದ್ರಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದ್ದು ಗಮನಾರ್ಹ.
ಸಾರ್ವಜನಿಕ ರಸ್ತೆ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವಂತಿರುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧರ್ಮಕ್ಕೆ ಸಂಬಂಧಿ ಸಿದ ಕಟ್ಟಡಗಳನ್ನು ತೆರವುಗೊಳಿಸುವಂತೆ ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ 2009ರಲ್ಲಿ ಸೂಚಿಸಿತ್ತು. ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರ ಈ ಬಗ್ಗೆ ಆದೇಶಿಸಿತ್ತು. ಅದನ್ನು ಆಧರಿಸಿ ಗದಗ ಜಿಲ್ಲಾಡಳಿತ ದಶಕದ ಹಿಂದೆಯೇ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಪಟ್ಟಿ ಮಾಡಿತ್ತು. ಕಳೆದ ಮೂರ್‍ನಾಲ್ಕು ವರ್ಷಗಳವರೆಗೂ ಅವುಗಳನ್ನು ಹಂತಹಂತವಾಗಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ.
242 ಧಾರ್ಮಿಕ ಕಟ್ಟಡಗಳ ತೆರವು: ಜಿಲ್ಲೆಯ 7 ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 242 ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲಾಗಿದೆ. ಆ ಪೈಕಿ ಗದಗ 199, ಮುಂಡರಗಿ 13, ನರಗುಂದ 1, ರೋಣ 3, ಶಿರಹಟ್ಟಿ 8, ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ 9 ಸೇರಿದಂತೆ 242 ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲಾಗಿದೆ. ಕಳೆದ ತಿಂಗಳು ರೋಣ ಪಟ್ಟಣದಲ್ಲಿ ಒಂದು ದೇವಸ್ಥಾನ, ಮಸೀದಿ ಕಟ್ಟಡ ತೆರವುಗೊಳಿಸಲಾಗಿದೆ. ಇದೊಂದು ನಿರಂತರ ಪ್ರಕ್ರಿಯೆ ಎನ್ನುತ್ತಾರೆ ಅಧಿ ಕಾರಿಗಳು.
ತಹಶೀಲ್ದಾರ್ ಮಟ್ಟದಲ್ಲಿ ಸಭೆ: 2009ರಲ್ಲಿ ಸುಪ್ರೀಂಕೋರ್ಟ್ ಆದೇಶದ ಬಳಿಕ ಅದನ್ನು ನಿರಂತರವಾಗಿ ರಾಜ್ಯ ಉತ್ಛ ನ್ಯಾಯಾಲಯ ಇದರ ಮೇಲ್ವಿಚಾರಣೆ ನಡೆಸುತ್ತಿದೆ. ಅದರಂತೆ ಹೈಕೋರ್ಟ್ ಎರಡು ವರ್ಷಗಳ ಹಿಂದೆ ಈ ಬಗ್ಗೆ ಸೂಚನೆ ನೀಡಿತ್ತು. ಅದಾದ ಬಳಿಕ ಅನ ಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕೇಂದ್ರಗಳನ್ನು ಗುರುತಿಸುವುದು, ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕಾಗಿ ಆಯಾ ತಾಲೂಕಿನ ತಹಶೀಲ್ದಾರ್‌ಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕಾಲಕಾಲಕ್ಕೆ ಆ ಬಗ್ಗೆ ಜಿಲ್ಲಾ ಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಶೀಲಿಸಲಾಗುತ್ತಿದೆ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಸ್ಥಳೀಯರ ವಿಶ್ವಾಸದೊಂದಿಗೆ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎನ್ನಲಾಗಿದೆ.
ಕಟ್ಟುನಿಟ್ಟಿನ ಕ್ರಮವಿಲ್ಲ: ಎರಡು ವರ್ಷಗಳ ಹಿಂದೆ ಆಗಿನ ಜಿಲ್ಲಾ ಧಿಕಾರಿ ಎಂ.ಜಿ.ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈ ಕುರಿತು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು. ನ್ಯಾಯಾಲಯ ಆದೇಶದಂತೆ ಸಾರ್ವಜನಿಕ ಉದ್ಯಾನ, ಸರಕಾರಿ ಜಾಗೆ ಹಾಗೂ ರಸ್ತೆಗಳನ್ನು ಅತಿಕ್ರಮಿಸಿದ ಧಾರ್ಮಿಕ ಕೇಂದ್ರಗಳನ್ನು ಪಟ್ಟಿ ಮಾಡುವಂತೆ ಸೂಚಿಸಿದ್ದರು. ಆದರೆ ಅವರ ವರ್ಗಾವಣೆ ಬಳಿಕ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ನಡೆದಿಲ್ಲ. ಬೆರಳೆಣಿಕೆಯಷ್ಟು ರಸ್ತೆ ಬದಿಗಿರುವ ಸಣ್ಣಪುಟ್ಟ ಕಟ್ಟೆಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ಆದರೆ ಉದ್ಯಾನ ಮತ್ತು ನಾಗರಿಕ ಮೀಸಲು ನಿವೇಶನ, ರಸ್ತೆಗಳನ್ನು ಅತಿಕ್ರಮಿಸಿದ ಧಾರ್ಮಿಕ ಕಟ್ಟಡಗಳ ಬಗ್ಗೆ ಅಧಿ ಕಾರಿಗಳು ಚಕಾರವೆತ್ತುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.