ಆಲೂರು: ಪಟ್ಟಣ ಪಂಚಾಯಿತಿಗೆ ಸೇರಿದ ವಾಣಿಜ್ಯ ಸಂಕೀರ್ಣ ಹಿಂಭಾಗದ ಹಳೇ ಪೊಲೀಸ್ ಕ್ವಾಟ್ರಸ್ ಶಿಥಿಲಗೊಂಡು, ಗಿಡಗಂಟಿಗಳು ಬೆಳೆದು ಅಕ್ರಮ ಚಟುವಟಿಕೆ ತಾಣವಾಗಿದೆ. ಇದರಿಂದ ಅಕ್ಕಪಕ್ಕದ ಅಂಗಡಿ ಮಾಲಿಕರಿಗೆ, ಸ್ಥಳೀಯರು ನಿವಾಸಿಗಳಿಗೆ ತೀವ್ರತೊಂದರೆ ಆಗುತ್ತಿದೆ. ಪಟ್ಟಣದ ತಾಲೂಕು ಕಚೇರಿ, ಪಪಂ, ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿನ ಈ ಹಳೇ ಕ್ವಾಟ್ರಸ್ 30 ವರ್ಷಗಳಿಂದ ಪಾಳು ಬಿದ್ದಿವೆ. ಕಟ್ಟಡದ ಸುತ್ತಲು ಗಿಡ ಗಂಟಿಗಳು ಬೆಳೆದು, ಕಟ್ಟಡ ಸಂಪೂರ್ಣ ಮುಚ್ಚಿ ಹೋಗಿದೆ. ಪುಂಡ ಪೋಕರಿಗಳಿಗೆ ಅಕ್ರಮ ಚಟುವಟಿಕೆಗಳ ಅಡ್ಡವಾಗಿದೆ. ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ತಾಣವಾಗಿ ಮಾಡಿಕೊಂಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಕ್ವಾಟ್ರಸ್ ಅಕ್ಕಪಕ್ಕದ ನಿವಾಸಿಗಳು, ಅಂಗಡಿಯವರು ಕಸ ಸುರಿಯುತ್ತಿದ್ದು, ಕ್ವಾಟ್ರಸ್ ಜಾಗ ತಿಪ್ಪೆಗುಂಡಿಯಾಗಿದೆ. ಶಿಥಿಲಗೊಂಡ ಕಟ್ಟಡದ ಒಳಗಡೆ ಕುಡಿದು ಬಿಸಾಡಿರುವ ಮದ್ಯದ ಬಾಟಲಿಗಳು, ಎಲ್ಲಂದರಲ್ಲಿ ಕಸ ಹಾಕಿರುವುದರಿಂದ ಸೊಳ್ಳೆಗಳ ಕಾಟ ಹೇಳತೀರದಾಗಿದೆ. ಕ್ರೀಮಿ ಕೀಟಗಳ ಉತ್ಪತ್ತಿಯ ತಾಣವಾಗಿದೆ. ಈ ಹಳೇ ಕ್ವಾಟ್ರಸ್ ಬಗ್ಗೆ ಚಿಂತಿಸದೆ, ಅಧಿಕಾರಿಗಳು ತೋರುತ್ತಿರುವ ದಿವ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಿದೆ.
ಪಟ್ಟಣದ ಶೆಟ್ಟರ್ ಬೀದಿ, 10ನೇ ವಾರ್ಡ್, ಅಂಬೇಡ್ಕರ್ ರಸ್ತೆಗೆ ಹೋಗುವ ಸಾರ್ವಜನಿಕರು ಈ ಕಟ್ಟಡದ ಪಕ್ಕದ ರಸ್ತೆಯ ಮೂಲಕವೇ ಸಂಚರಿಸಬೇಕು. ಕತ್ತಲು ಕವಿದಂತೆ ಕಳ್ಳಕಾಕರ ಉಪಟಳ ಹೆಚ್ಚಾಗುತ್ತದೆ. ಸಂಜೆ 7 ಗಂಟೆ ನಂತರ ಈ ರಸ್ತೆಯಲ್ಲಿ ಜನ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕ್ವಾಟ್ರಸ್ ತೆರವು ಗೊಳಿಸಲಿ, ಅಲ್ಲಿಯವರೆಗೆ ಗಿಡಗಂಟಿ ತೆರವು ಮಾಡಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಈ ಕಟ್ಟಡದ ಪಕ್ಕದಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ವಾಣಿಜ್ಯ ಸಂಕೀರ್ಣವಿದ್ದು, ಟೈಲರ್ ಶಾಪ್, ಜೆರಾಕ್ಸ್ ಅಂಗಡಿ, ಎಲೆಕ್ಟ್ರೀಕಲ್ ಅಂಗಡಿ, ಬೇಕರಿ, ಮರಗೆಲಸ ನಡೆಸುವ ಅಂಗಡಿಗಳು ಇವೆ. ದಿನಕ್ಕೆ ನೂರಾರು ಜನರು ಇಲ್ಲಿಗೆ ಬಂದು ಹೋಗುತ್ತಾರೆ.
ಇದನ್ನೂ ಓದಿ:ಹಿಟಾಚಿ ವಾಹನಕ್ಕೆ ತಗುಲಿದ ವಿದ್ಯುತ್ ತಂತಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾದುರಂತ
ಹಳೇ ಪೊಲೀಸ್ ಕ್ವಾಟ್ರಸ್ ಸ್ವತ್ಛತೆ ಇಲ್ಲದೆ ಪಾಳು ಬಿದ್ದಿರುವ ಕಾರಣದಿಂದ ನಗರಕ್ಕೆ ಬಂದು ಹೋಗುವವರು ಮಲಮೂತ್ರ ವಿಸರ್ಜನೆ ಇಲ್ಲಿಯೇ ಮಾಡುತ್ತಿದ್ದಾರೆ.ಸ್ವತ್ಛತೆ ಕಾಣದ ಈ ಕ್ವಾಟ್ರಸ್ ಬಳಿ ಇರು ಅಂಗಡಿ ಮುಗ್ಗಟ್ಟುಗಳಿಗೆ ವ್ಯಾಪಾರಸ್ಥರು ಬರಲು ಮುಜುಗರ ಪಡುತ್ತಿದ್ದಾರೆ. ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಂಗಡಿಯ ಬಾಡಿಗೆ ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಅಂಗಡಿ ಮಾಲಿಕರು ಮನವಿ ಮಾಡಿದ್ದಾರೆ. ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಸ್ವತ್ಛತೆ ಕಾಣದೆ ಸಾರ್ವಜನಿಕರಿಗೆ ದಿನನಿತ್ಯ ಒಂದಲ್ಲಾ ಒಂದು ರೀತಿಯ ಸಮಸ್ಯೆ ಉಂಟು ಮಾಡುತ್ತಿರುವ ಹಳೇ ಪೊಲೀಸ್ ಕ್ವಾಟ್ರಸ್ ಕಟ್ಟಡ ತೆರವು ಗೊಳಿಸಿ ಜನರಿಗೆ ಶಾಶ್ವತ ಪರಿಹಾರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
ಕುಮಾರಸ್ವಾಮಿ ಆಲೂರು