ದಾಂಡೇಲಿ: ನಗರದ ಸಂಡೇ ಮಾರ್ಕೆಟಿನ ಒಳ ಮತ್ತು ಹೊರ ಆವರಣದಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡಿದ್ದ ತರಕಾರಿ ಅಂಗಡಿಗಳನ್ನು ಪೌರಾಯುಕ್ತ ಡಾ| ಸೈಯದ್ ಜಾಹೇದಾಲಿ ನೇತೃತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು.
ವ್ಯಾಪಾರಸ್ಥರಿಂದ ಆಕ್ರೋಶ ವ್ಯಕ್ತವಾದರೂ, ಪೌರಾಯುಕ್ತ ಡಾ| ಸೈಯದ್ ಜಾಹೇದಾಲಿಯವರು ಎಲ್ಲರನ್ನು ಸಮಾಧಾನ ಪಡಿಸಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು.
ಸಂಡೇ ಮಾರ್ಕೆಟಿನ ಮಳಿಗೆದಾರರು 7 ರಿಂದ 10 ಸಾವಿರದವರೆಗೆ ಬಾಡಿಗೆ ನೀಡಿ ಮಳಿಗೆ ಪಡೆದುಕೊಂಡು ವ್ಯಾಪಾರ ನಡೆಸಲು ಎಲ್ಲೆಂದರಲ್ಲಿ ಹರಡಿಕೊಂಡಿದ್ದ ತರಕಾರಿ ಹಾಗೂ ವಿವಿಧ ಅಂಗಡಿಗಳಿಂದ ತೀವ್ರ ತೊಂದರೆಯಾಗುತ್ತಿತ್ತು. ಇದೀಗ ತೆರವುಗೊಳಿಸಲಾಗಿದ್ದು, ನಗರಸಭೆ ವತಿಯಿಂದ ಸಂಡೇ ಮಾರ್ಕೆಟ್ ಆವರಣದೊಳಗೆ ಸ್ಥಳ ನಿಗದಿಪಡಿಸಿ ಮಾರ್ಕಿಂಗ್ ಮಾಡಿ, ಅದೇ ಸ್ಥಳದಲ್ಲಿ ತರಕಾರಿ ಹಾಗೂ ಬಿಡಿ ವ್ಯಾಪಾರಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈಗಾಗಲೆ ಪಾರ್ಕಿಂಗ್ ಕಾರ್ಯವನ್ನು ನಗರಸಭೆ ಆರಂಭಿಸಿದೆ.
ಪುನರ್ ನಿರ್ಮಾಣ: ಸಂಡೆ ಮಾರ್ಕೆಟ್ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಇರಬೇಕೆಂಬ ದೃಷ್ಟಿಯಿಂದ ಹಾಗೂ ಬಾಡಿಗೆಗೆ ಪಡೆದುಕೊಂಡ ಮಳಿಗೆದಾರರಿಗೆ ತರಕಾರಿ ವ್ಯಾಪಾರಸ್ಥರಿಂದ ತೊಂದರೆ ಆಗಬಾರದೆಂದು, ನಿಗದಿತ ಸ್ಥಳಕ್ಕೆ ಮಾರ್ಕಿಂಗ್ ಮಾಡಿ ರೈತರಿಂದ ಹಿಡಿದು ಎಲ್ಲ ವ್ಯಾಪಾರಸ್ಥರಿಗೂ ಸಮಾನವಾಗಿ ಸ್ಥಳ ಹಂಚಿಕೆ ಮಾಡುವ ದೃಷ್ಟಿಯಿಂದ ತೆರವುಗೊಳಿಸಲಾಗಿದೆ. ವ್ಯಾಪಾರಸ್ಥರು ಸಹಕರಿಸಬೇಕು. ಒಟ್ಟಿನಲ್ಲಿ ಪುನರ್ ನಿರ್ಮಾಣದ ದೃಷ್ಟಿಯಿಂದ ಮಾತ್ರ ಆವರಣದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಡಾ| ಸೈಯದ್ ಜಾಹೇದಾಲಿ ಪತ್ರಿಕೆಗೆ ತಿಳಿಸಿದ್ದಾರೆ.