ಮುಧೋಳ: ಬಹಳ ವರ್ಷದಿಂದ ಸ್ವಚ್ಛತೆ ಕಾಣದಾಗಿದ್ದ ಐತಿಹಾಸಿಕ ದತ್ತ ಕೆರೆಯ ಗತವೈಭವವನ್ನು ಮರಳಿ ತರುವ ಉದ್ದೇಶದೊಂದಿಗೆ ಪಣ ತೊಟ್ಟ ಯುವ ಸಮೂಹದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಗರದ ವಿವಿಧ ಯುವಕ ಮಿತ್ರ ಮಂಡಳಿ ಸದಸ್ಯರು ಕೆರೆ ಸ್ವಚ್ಛತೆ ಅಭಿಯಾನಕ್ಕೆ ಕೈ ಜೋಡಿಸಿರುವುದು ಪರಿಸರ ಪ್ರಿಯರಲ್ಲಿ ಸಂತಸ ಮನೆ ಮಾಡಿದೆ.
ಗುರೂಜಿ ಮಾತು ಪ್ರೇರಣೆ: ಇತ್ತೀಚೆಗೆ ನಗರಕ್ಕಾಗಮಿಸಿದ್ದ ಗೌರಿಗದ್ದೆ ಆಶ್ರಮದ ಅವಧೂತ ವಿನಯ ಗುರೂಜಿಯವರು ದತ್ತ ಮಂದಿರಕ್ಕೆ ಭೇಟಿ ನೀಡಿದ್ದಾಗ ದತ್ತಕೆರೆ ವೀಕ್ಷಿಸಿದ್ದರು. ದೇವಸ್ಥಾನದ ಪಕ್ಕದ ಕೆರೆ ಸ್ವಚ್ಛತೆಯಿಂದಿದ್ದರೆ ಶೋಭೆ ಎಂಬ ಮಾತು ಹೇಳಿದ್ದರು. ಇದನ್ನೇ ಪ್ರೇರಣೆಯಾಗಿಸಿಕೊಂಡ ಯುವಕರ ಕೆರೆ ಸ್ವಚ್ಛತೆ ಅಭಿಯಾನಕ್ಕೆ ಟೊಂಕ ಕಟ್ಟಿ ನಿಂತಿದೆ.
ಮೊದಲ ದಿನ ಮೂವತ್ತು ಜನ: ಅಂದಾಜು ಒಂದು ತಿಂಗಳು ಕಾಲ ಸ್ವಚ್ಛತೆ ಅಭಿಯಾನದ ಯೋಜನೆ ಹಾಕಿಕೊಂಡಿದ್ದು, ಸ್ವಚ್ಛತಾ ಕಾರ್ಯಕ್ಕೆ ಮೊದಲ ದಿನ ಮೂವತ್ತು ಜನರು ಕೈಜೋಡಿಸಿದ್ದಾರೆ. ಬಹುತೇಕ ಯುವಕರು ಅವರವರ ಕೆಲಸ ಕಾರ್ಯಗಳಿಗನುಗುಣವಾಗಿ ಅನುಕೂಲವಾಗುವಂತೆ ಬೆಳಗಿನ ಜಾವ 6ರಿಂದ 9 ಗಂಟೆವರೆಗೆ ಕೆರೆ ಸ್ವಚ್ಛತೆ ಕಾರ್ಯದಲ್ಲಿ ತೊಡಗುತ್ತಾರೆ. ಇದರಿಂದ ಕೆರೆ ಸ್ವತ್ಛತೆಯೂ ಆಗುತ್ತದೆ, ವ್ಯಾಯಾಮವೂ ಆಗುತ್ತದೆ. ಯುವಕರು ಹಮ್ಮಿಕೊಂಡ ಸ್ವಚ್ಛತೆ ಅಭಿಯಾನದ ಮೊದಲ ದಿನ ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿಯೂ ಸಹ ಭಾಗಿಯಾಗಿದ್ದರು.
ಸ್ವಚ್ಛತೆಗೆ ಯಾರೇ ಬಂದರೂ ಸ್ವಾಗತ: ನಗರದ ಕೆರೆ ಅಭಿವೃದ್ಧಿಗೆ ಪಕ್ಷಾತೀತವಾಗಿ ದುಡಿಯುತ್ತಿದ್ದು, ಕೆರೆ ಸ್ವಚ್ಛತೆಗೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ನಮಗೆ ವಿವಿಧ ಯುವಕ ಸಂಘದವರು ಕರೆ ಮಾಡಿ ಕೆರೆ ಸ್ವಚ್ಛತೆಗೆ ಕೈಜೋಡಿಸುವ ಭರವಸೆ ನೀಡಿದ್ದು, ಹೊಸ ಹುಮ್ಮಸ್ಸು ಮೂಡಿಸಿದೆ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸದಾ ಜಾಧವ.
ವಧೂತ ವಿನಯ ಗುರೂಜಿಯವರ ಪ್ರೇರಣೆಯಿಂದ ಐತಿಹಾಸಿಕ ದತ್ತ ಕೆರೆ ಸ್ವಚ್ಛತೆ ಅಭಿಯಾನಕ್ಕೆ ಮುಂದಾಗಿದ್ದು, ಅಭಿಯಾನದ ಮೊದಲ ದಿನದ ಕಾರ್ಯ ಮುಗಿದ ಬಳಿಕ ಹಲವಾರು ಯುವಕ ಸಂಘದವರು ಕರೆ ಮಾಡಿ ಸ್ವಚ್ಛತಾ ಅಭಿಯಾನಕ್ಕೆ ನಾವೂ ಕೈಜೋಡಿಸುತ್ತೇವೆ ಎಂದು ತಿಳಿಸಿದ್ದಾರೆ. ಯಾರೇ ಬಂದರೂ ಅವರಿಗೆ ಸ್ವಾಗತ. –
ಸದಾ ಜಾಧವ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ