Advertisement

ಸ್ವತ್ಛತಾ ಸಿಬ್ಬಂದಿ ಕಾಳಜಿ ಕೇಳ್ಳೋರಿಲ್ಲ

04:26 PM Aug 15, 2017 | |

ಕಲಬುರಗಿ: ನಗರದ ಜಿಲ್ಲಾಸ್ಪತ್ರೆಯ ಸ್ವತ್ಛತಾ ಸಿಬ್ಬಂದಿಗೆ ಯಾವುದೇ ಸುರಕ್ಷೆ ಇಲ್ಲ. ಇರುವ ಸಿಬ್ಬಂದಿ ಕಾಳಜಿಯಂತೂ ಕೇಳುವವರಿಲ್ಲ. ಇದರ ಮಧ್ಯೆ ಹೆರಿಗೆ ವಿಭಾಗ ಮತ್ತು ತುರ್ತು ಚಿಕಿತ್ಸಾ ವಿಭಾಗದಲ್ಲೂ ಹೇಳಿಕೊಳ್ಳುವಂತಹ ಸ್ವತ್ಛತೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ಲೋಪ ಕಂಡುಬಂದಿದೆ. ಹೆರಿಗೆ ಹಾಗೂ ಜನರಲ್‌ ಎರಡೂ ಆಸ್ಪತ್ರೆಗಳು ಸೇರಿ ಒಟ್ಟು 197 ಕಾಯಂ ಸ್ವತ್ಛತಾ ಸಿಬ್ಬಂದಿ ಇದ್ದಾರೆ. ಇವರಿಗೆ ಉತ್ತಮ ಸಂಬಳವೇನೋ ಸಿಗುತ್ತದೆ. ಆದರೆ, ಸ್ವತ್ಛತೆ ಮಾಡಲು ಬೇಕಾಗಿರುವ ಗ್ಲೌಸ್‌, ಗಮ್‌ ಅಥವಾ ಬೂಟುಗಳನ್ನು ನೀಡಿಲ್ಲ. ಇವುಗಳಿಲ್ಲದೆ ಸ್ವತ್ಛತೆಗೆ ಮುಂದಾದರೆ ರೋಗಪೀಡಿತರಾಗುವ ಆತಂಕ ಸ್ವತ್ಛತಾ ಸಿಬ್ಬಂದಿಯನ್ನು ಕಾಡುತ್ತಿದೆ. ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುವ ಸಿಬ್ಬಂದಿಗೆ ಹೆಪಟೈಟಿಸ್‌ ಬಿ ಲಸಿಕೆಯನ್ನು ನಿಯಮಿತವಾಗಿ ಹಾಕಿಸಲಾಗುತ್ತಿದೆ. ಆದರೆ, ಅವರಿಗೂ ಗ್ಲೌಸ್‌ ನೀಡಿಲ್ಲ. ತ್ಯಾಜ್ಯ ವಿಲೇವಾರಿ ಮಾಡುವಾಗ ಸೂಜಿ, ಬ್ಲೇಡ್‌, ಬಾಟಲಿ ಚೂರು ಇತ್ಯಾದಿಗಳು ಕೈಗೆ ಅಥವಾ ದೇಹಕ್ಕೆ ತಗುಲಿ ಗಾಯವಾದರೆ ಏನು ಗತಿ ಎನ್ನುವುದು ಪ್ರಶ್ನೆಯಾಗಿದೆ. ಹಲವು ದಿನಗಳಿಂದ ತಮಗೆ ಸುರಕ್ಷಾ ಪರಿಕರಗಳನ್ನು ವಿತರಿಸಿಲ್ಲ ಎಂಬುದು ಸ್ವತ್ಛತಾ ಸಿಬ್ಬಂದಿ ಆರೋಪ. ಇನ್ನು ಆಸ್ಪತ್ರೆ ಕಾರಿಡಾರ್‌ಗಳು, ನೀರು, ಶೌಚಾಲಯಗಳಲ್ಲಿ ಸ್ವತ್ಛತೆ ಕೊರತೆಯಿದೆ. ಇದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ. ಅವರ ಜತೆ ಬರುವ ಸಂಬಂಧಿಕರು, ಆರೈಕೆಗೆಂದು ಜತೆಗಿರುವವರಿಗೆ ಕುಳಿತು ಊಟ ಮಾಡಲೂ ಸ್ಥಳವಿಲ್ಲದಂತಾಗಿದೆ. ಇರುವ ಸ್ಥಳದಲ್ಲಿ ಕೊಳಚೆ ಹರಡಿದೆ, ಗಿಡ-ಗಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ರೋಗಿಗಳಿಗೆ ಊಟ ತರುವವರು ಹಾಗೂ ಅವರೊಂದಿಗೆ ಇರುವವರು ಆಸ್ಪತ್ರೆ ಮೆಟ್ಟಿಲುಗಳ ಮೇಲೆ, ಪಕ್ಕದಲ್ಲಿ ಕುಳಿತು ಊಟ ಮಾಡುವ ಸ್ಥಿತಿ ಇದೆ. ಆದರೆ, ಅವರೂ ಊಟ ಮಾಡಿ ಅಲ್ಲೇ ಪಕ್ಕದಲ್ಲಿ ಮುಸುರೆ ಚೆಲ್ಲುವುದರಿಂದ ವಾತಾವರಣ ಇನ್ನಷ್ಟು ಹದಗೆಡುತ್ತಿದೆ. ಜಿಲ್ಲಾ ಸರ್ಜನ್‌ ಹಾಗೂ ಜಿಮ್ಸ್‌ ನಿರ್ದೇಶಕ ರವಿ ರಾಠೊಡ ಸೂಕ್ತ ಕ್ರಮ ಕೈಗೊಂಡು, ಆಸ್ಪತ್ರೆ ಆವರಣ ಸ್ವತ್ಛತೆಗೆ ಹಾಗೂ ಸ್ವತ್ಛತಾ ಸಿಬ್ಬಂದಿಗೆ ಸುರಕ್ಷಾ ಸಲಕರಣೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next