ಚಾಮರಾಜನಗರ: ಭಾರತ್ ವಿಕಾಸ ಪರಿಷತ್ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದ ಪೌರ ಕಾರ್ಮಿಕರ ಕಾಲೋನಿಗೆ ತೆರಳಿ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ವಿಶ್ವ ಪೌರ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ವಿಶ್ವ ಪೌರಕಾರ್ಮಿಕರ ದಿನದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ತಮ್ಮ ಬಡಾವಣೆ ಸ್ವಚ್ಛಗೊಳಿಸಿಕೊಂಡು, ರಂಗೋಲಿ ಹಾಗೂ ಹೂವುಗಳಿಂದ ಶೃಂಗರಿಸಿದ್ದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಸ್ಥಳೀಯ ಶಾಖೆ ಮುಖ್ಯಸ್ಥೆ ಬಿ.ಕೆ.ದಾನೇಶ್ವರೀಜಿ. ಕ್ರೈ ಧರ್ಮದ ಸಿಸ್ಟರ್ ನಕ್ಷತ್ರ, ಮುಸ್ಲಿಂ ಧರ್ಮ ಗುರು ಮಹಮದ್ ಸೇರಿದಂತೆ ನಗರಸಭಾ ಸದಸ್ಯ ಮಹೇಶ್ ಅವರನ್ನು ಬಡಾವಣೆಯ ಮಕ್ಕಳು ಪುಷ್ಪವೃಷ್ಟಿಯೊಂದಿಗೆ ಮೆರವಣಿಗೆಯಲ್ಲಿ ಬರ ಮಾಡಿಕೊಂಡರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಐವರು ನಿವೃತ್ತ ಪೌರ ಕಾರ್ಮಿಕರಾದ ನಂಜಮ್ಮ, ನಾಗಮ್ಮ, ಪಳನಿಸ್ವಾಮಿ, ಸುಖಮ್ಮ, ಕುಪ್ಪಮ್ಮ ಅವರನ್ನು ರಾಜಯೋಗಿನಿ ಬಿ.ಕೆ. ದಾನೇಶ್ವರೀಜಿ ಹಾಗೂ ಯುವಶಕ್ತಿ ಪರಿಷತ್‌ನ ಅಧ್ಯಕ್ಷ ಎಲ್. ಸುರೇಶ್ ಸೀರೆ, ಕುಪ್ಪಸ, ಪಂಚೆ ಬಟ್ಟೆಯನ್ನು ನೀಡಿ, ಹೂವಿನ ಹಾರ ಹಾಕಿ, ಫಲತಾಂಬೂಲ ನೀಡಿ, ಅಭಿನಂದಿಸಿದರು. ಬಳಿಕ ಎಲ್. ಸುರೇಶ್ ಪೌರಕಾರ್ಮಿಕರ ಕಾಲಿಗೆ ಪುಷ್ಪ ನಮನ ಸಲ್ಲಿಸಿ, ಅಭಿನಂದನೆ ವ್ಯಕ್ತಪಡಿಸಿದರು.
ರಾಜಯೋಗಿನಿ ಬಿ.ಕೆ. ದಾನೇಶ್ವರೀಜಿ ಮಾತನಾಡಿ, ನಗರ ಸ್ವಚ್ಛವಾಗಿಡಲು ತಮ್ಮ ಜೀವನಮಾನವಿಡಿ ಶ್ರಮ ವಹಿಸಿದ, ಪೌರ ಕಾರ್ಮಿಕರು ನಿಜವಾದ ಬಂಧುಗಳು. ಬೀದಿಯ ಸ್ವಚ್ಛತೆ ಜೊತೆಗೆ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಬೇಕು. ವಿಶ್ವ ಪೌರ ಕಾರ್ಮಿಕರ ದಿನದಂದು ಅವರ ಕಾಲೋನಿಯಲ್ಲಿಯೇ ಹಿರಿಯನ್ನು ಸನ್ಮಾನಿಸಿರುವುದು ಹೆಮ್ಮೆ ಎನ್ನಿಸಿದೆ.
ಇಂಥ ಕಾರ್ಯಕ್ರಮಗಳ ಮೂಲಕ ಪೌರ ಕಾರ್ಮಿಕರ ಕೆಲಸವನ್ನು ಗೌರವಿಸುವ ಮೂಲಕ ಅವರ ವೃತ್ತಿ ಪಾವಿತ್ರ್ಯತೆಯನ್ನು ಮೆರೆಯಬೇಕಾಗಿದೆ. ಪೌರ ಕಾರ್ಮಿಕರು ಸಹ ಕೀಳರಿಮೆಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸುವ ಮೂಲಕ ಅವರನ್ನು ಸಮಾಜದ ಅಸ್ತಿಯನ್ನಾಗಿ ಮಾಡಬೇಕು. ಯಾವುದೇ ಕೆಲಸವು ಸಹ ಕೀಳಲ್ಲ. ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ, ಅದೇ ಕೈಲಾಸವಾಗುತ್ತದೆ ಎಂದರು.
ಭಾರತ್ ವಿಕಾಸ ಪರಿಷತ್ ಅಧ್ಯಕ್ಷ ಎಲ್. ಸುರೇಶ್ ಮಾತನಾಡಿ, ಪೌರ ಕಾರ್ಮಿಕರು ನಮ್ಮ ಬಡಾವಣೆಯನ್ನು ಸ್ವಚ್ಛವಾಗಿಡುವ ಮೂಲಕ ನಮ್ಮ ಆರೋಗ್ಯ ವೃದ್ಧಿಸಲು ಶ್ರಮಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಇಲ್ಲಿನ ಪೌರಕಾರ್ಮಿಕರ ಕಾಯಕವನ್ನು ನೋಡಿಕೊಂಡು ಬಂದಿದ್ದೇನೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ತಮ್ಮ ಕೆಲಸವನ್ನು ಮಾಡಿ, ಮಾದರಿಯಾಗಿದ್ದಾರೆ.
ಇಂಥವರನ್ನು ಸನ್ಮಾನಿಸುವ ಭಾಗ್ಯ ನಮ್ಮದಾಗಿದೆ. ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ಸೇವೆಯನ್ನು ಯಾರು ಸಹ ಮಾಡಲು ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಚೆಲುವ ಇತರರು ಇದ್ದರು.