ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ರವಿವಾರ ಇಲ್ಲಿನ ಬಸ್ ನಿಲ್ದಾಣಗಳು ಹಾಗೂ ಕಾರ್ಯಚರಣೆಗೊಳ್ಳುವ ಬಸ್‌ಗಳನ್ನು ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ ಸಿಂಪರಿಸಿ ಸ್ವಚ್ಛಗೊಳಿಸಲಾಯಿತು.
ಕಳೆದ ಐದು ದಿನಗಳಿಂದ ಬಸ್ ಸಂಚಾರ ನಡೆಯುತ್ತಿದ್ದು, ರವಿವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ, ಹೊಸೂರು ಪ್ರಾದೇಶಿಕ ಟರ್ಮಿನಲ್ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪರಿಸಲಾಯಿತು. ಇನ್ನೂ ಕಾರ್ಯಚರಣೆಗೊಳ್ಳುವ ಬಸ್‌ಗಳಿಗೂ ದ್ರಾವಣ ಸಿಂಪರಿಸಿ ನೀರಿನಿಂದ ಶುಚಿಗೊಳಿಸುವ ಕಾರ್ಯ ನಡೆಯಿತು.
ವಿಭಾಗದಲ್ಲಿ 462 ಬಸ್‌ಗಳಿದ್ದು, ನಿತ್ಯವೂ 110-150 ಬಸ್‌ಗಳನ್ನು ನಿಲ್ದಾಣಕ್ಕೆ ತೆರಳಿದ್ದು, ಅವುಗಳಲ್ಲಿ 80-100 ಬಸ್‌ಗಳು ವಿವಿಧ ಸ್ಥಳಗಳಿಗೆ ತೆರಳುತ್ತಿವೆ. ಘಟಕದಿಂದ ಹೊರ ಹೋದ ಪ್ರತಿಯೊಂದು ಬಸ್‌ಗೆ ದ್ರಾವಣ ಸಿಂಪರಿಸಿ ಶುಚಿಗೊಳಿಸಲಾಗುತ್ತದೆ. ಒಮ್ಮೆ ಕಾರ್ಯಾಚರಣೆ ಮಾಡಿದ ಬಸ್‌ಗೆ ದ್ರಾವಣ ಸಿಂಪರಿಸಿ ಎರಡು ದಿನಗಳ ನಂತರ ಡಿಫೂದಲ್ಲಿ ನಿಲ್ಲಿಸಲಾಗುತ್ತಿದೆ. ಪ್ರತಿಯೊಬ್ಬ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದ ನಂತರವಷ್ಟೇ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. 55ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಸುಲಭ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪ್ರತಿಯೊಬ್ಬರ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಮಾರ್ಗ ಮಧ್ಯದಲ್ಲಿ ಪ್ರಯಾಣಿಕರು ಹತ್ತಿ ಇಳಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಎರಡು ಸ್ಥಳಗಳ ನಡುವೆ ತಡೆ ರಹಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ದೂರದ ಊರುಗಳಿಗೆ ಪ್ರಯಾಣಿಸುವವರು ಮುಂಗಡ ಟಿಕೆಟ್ ಕಾಯ್ದಿರಿಸಿ ಸಂಚರಿಸಬಹುದಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಸಂಸ್ಥೆ ಹೆಚ್ಚು ಆದ್ಯತೆ ನೀಡಿದ್ದು, ಜನರು ಯಾವುದೇ ಆತಂಕವಿಲ್ಲದೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಚರಿಸಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.