Advertisement

ಸಾರ್ವಜನಿಕ ಸಾರಿಗೆ ಲಕಲಕ!

12:38 AM Mar 05, 2020 | Lakshmi GovindaRaj |

ಬೆಂಗಳೂರು: “ಕೊರೊನಾ ವೈರಸ್‌’ ಬೆಂಗಳೂರು ಮೂಲಕವೇ ಹಾದುಹೋಗಿದೆ ಎಂಬುದು ಖಾತ್ರಿಯಾದ ಬೆನ್ನಲ್ಲೇ ಎಚ್ಚೆತ್ತ ನಗರದ ವಿವಿಧ ಸಮೂಹ ಸಾರಿಗೆಗಳು ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿವೆ.

Advertisement

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ, “ನಮ್ಮ ಮೆಟ್ರೋ’ದಲ್ಲಿ ಬೆಳಗ್ಗೆಯಿಂದಲೇ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ, ನೀರಿನಲ್ಲಿ ರಾಸಾಯನಿಕ ಅಂಶ ಮಿಶ್ರಣ ಮಾಡಿ, ಸ್ವಚ್ಛಗೊಳಿಸುವ ಕೆಲಸ ಭರದಿಂದ ನಡೆಯಿತು. ಬಸ್‌ಗಳ ಆಸನ, ಕಂಬಿಗಳು, ದ್ವಾರಗಳು, ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳನ್ನು ಒದ್ದೆಬಟ್ಟೆಯಿಂದ ಆಗಾಗ್ಗೆ ಒರೆಸುವುದು ಕಂಡುಬಂತು.

ಅಲ್ಲದೆ, ಘಟಕಗಳಿಂದ ಬಸ್‌ಗಳೊಂದಿಗೆ ಹೊರಬೀಳುವ ಚಾಲನಾ ಸಿಬ್ಬಂದಿಗೆ ಮೇಲಧಿಕಾರಿಗಳು ಕೊರೊನಾ ವೈರಸ್‌ ಬಗ್ಗೆ ಅರಿವು ಮೂಡಿಸಿದರು. ಕರ್ತವ್ಯದಲ್ಲಿದ್ದಾಗ ಈ ವೈರಸ್‌ ಸೋಂಕದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಪ್ರಯಾಣಿಕರಿಗೆ ತಿಳಿವಳಿಕೆ ನೀಡುವುದು, ಅನಾರೋಗ್ಯಪೀಡಿತ ಪ್ರಯಾಣಿಕರು ಕಂಡುಬಂದರೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಅರಿವು ಮೂಡಿಸಿದರು.

ವಿಶೇಷವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರು, ತಿರುಪತಿ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ಮಾಡುವ ಕೆಎಸ್‌ಆರ್‌ಟಿಸಿಯ ಫ್ಲೈಬಸ್‌ಗಳು, ನಗರದ ಮೆಜೆಸ್ಟಿಕ್‌, ಮಾರತ್‌ಹಳ್ಳಿ, ವೈಟ್‌ಫೀಲ್ಡ್‌ ಮತ್ತಿತರ ಕಡೆಗಳಿಂದ ವಿಮಾನ ನಿಲ್ದಾಣದ ಮಾರ್ಗಗಳಲ್ಲಿ ಸಂಚರಿಸುವ ಬಿಎಂಟಿಸಿಯ ವಾಯುವಜ್ರ ಬಸ್‌ಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಯಿತು.

ಇನ್ನು ಬಿಎಂಟಿಸಿ ಬಸ್‌ಗಳಲ್ಲಿ ಚಾಲನಾ ಸಿಬ್ಬಂದಿ ಮುಖಗವಸು ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯಿಂದ ಯಾವುದೇ ಮಾಸ್ಕ್ಗಳನ್ನು ಹಂಚಿಕೆ ಮಾಡಿಲ್ಲ. ಆದರೆ, ಚಾಲನಾ ಸಿಬ್ಬಂದಿಯೇ ಸ್ವಂತ ಖರ್ಚಿನಿಂದ ಮಾಸ್ಕ್ ಖರೀದಿಸಿ ಧರಿಸುತ್ತಿದ್ದಾರೆ. ಈ ನಡುವೆ ಚಾಲಕ ಕಂ ನಿರ್ವಾಹಕ ಯೋಗೇಶ್‌ ಗೌಡ ಎಂಬುವವರು ಸ್ವಯಂಪ್ರೇರಿತರಾಗಿ ಬುಧವಾರ ಸುಮಾರು 250 ಮಾಸ್ಕ್ ಖರೀದಿಸಿ, ಶಾಂತಿನಗರ ಬಸ್‌ ನಿಲ್ದಾಣದಲ್ಲಿ ಚಾಲನಾ ಸಿಬ್ಬಂದಿಗೆ ವಿತರಿಸಿ, ಜಾಗೃತಿ ಮೂಡಿಸಿದರು.

Advertisement

ರೈಲ್ವೆಯಿಂದ ಮುನ್ನೆಚ್ಚರಿಕಾ ಕ್ರಮ: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ರೈಲುಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಕೆಲವು ಸಲಹೆ ನೀಡಿದೆ. ಪ್ರಯಾಣದ ವೇಳೆ ಅನಾರೋಗ್ಯಕ್ಕೆ ತುತ್ತಾದರೆ ಟ್ರೈನ್‌ ಕ್ಯಾಪ್ಟನ್‌ ಅಥವಾ ಟಿಕೆಟ್‌ ಪರೀಕ್ಷಕರ ಗಮನಕ್ಕೆ ತಂದು ವೈದ್ಯಕೀಯ ನೆರವು ಪಡೆಯಬೇಕು ಎಂದು ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ.

ಅಲ್ಲದೆ, ರೈಲು ನಿಲ್ದಾಣಗಳು, ಬೋಗಿಗಳನ್ನು ಸ್ವಚ್ಛತೆಗೊಳಿಸುವವರು ಪ್ರಯಾಣಿಕರು ಬಳಸುವ ಶೌಚಾಲಯ, ಕಮೋಡ್‌, ಬಾಗಿಲು, ಆಸನಗಳು, ವಿಶ್ರಾಂತಿ ಕೊಠಡಿ, ಫ್ಲಾಟ್‌ಫಾರ್ಮ್ಗಳು, ವಾಟರ್‌ ಟ್ಯಾಪ್‌ಗ್ಳು ಮೊದಲಾದವುಗಳನ್ನು ಆಲ್ಕೋಹಾಲ್‌ ಅಂಶವಿರುವ ಬ್ಯಾಕ್ಟೀರಿಯಾ ನಿರೋಧಕ ರಾಸಾಯನಿಕದಿಂದ ಸ್ವಚ್ಚಗೊಳಿಸಬೇಕು. ಸ್ವಚ್ಛಗೊಳಿಸುವವರು ಮಾಸ್ಕ್ ಹಾಗೂ ಗ್ಲೌಸ್‌ ಕಡ್ಡಾಯವಾಗಿ ಧರಿಸಬೇಕು ಎಂದು ರೈಲ್ವೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ರಾಸಾಯನಿಕದಿಂದ ಮೆಟ್ರೋ ಸ್ವಚ್ಛತೆ: “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ಸ್ವಚ್ಛತಾ ಕಾರ್ಯ ತೀವ್ರಗೊಳಿಸಲಾಗಿದೆ. ಉದಾಹರಣೆಗೆ ಈ ಮೊದಲು ನಾಲ್ಕು ಬಾರಿ ಸ್ವಚ್ಛಗೊಳಿಸುತ್ತಿದ್ದರೆ, ಈಗ ಆ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್‌ ತಿಳಿಸಿದರು. ಇನ್ನು ಮೆಟ್ರೋ ರೈಲುಗಳನ್ನು ನಾವು ಈಗಾಗಲೇ ರಾಸಾಯನಿಕದಿಂದ ಸ್ವಚ್ಛಗೊಳಿಸುತ್ತಿದ್ದು, ಈ ಕೆಲಸ ಈಗ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯುತ್ತಿದೆ. ಜತೆಗೆ ನಿಲ್ದಾಣಗಳಲ್ಲಿ ಫ‌ಲಕಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next