Advertisement

‘ಸ್ವಚ್ಛತೆಗೆ ಪ್ರಶಸ್ತಿ: ಕರೋಪಾಡಿ ಗ್ರಾ.ಪಂ.ನಲ್ಲಿ

03:17 PM Dec 15, 2017 | Team Udayavani |

ಬಂಟ್ವಾಳ: ಸ್ವಚ್ಛತೆಗೆ ಪ್ರಶಸ್ತಿ ಪಡೆಯುತ್ತೇವೆ, ಆದರೆ ಕರೋಪಾಡಿ ಗ್ರಾಮದಲ್ಲಿ 15 ಕುಟುಂಬಕ್ಕೆ ಶೌಚಾಲಯವೇ ಇಲ್ಲ , ಇಂತಹ ಹಲವು ಪ್ರಕರಣಗಳು ತಾಲೂಕಿನಲ್ಲಿವೆ. ಅಧಿಕಾರಿ ವರ್ಗ ಕಾನೂನುಕಟ್ಟಳೆ ಎಂದು ಸೌಲಭ್ಯ ನೀಡಲು ತಡಮಾಡುತ್ತಿದೆ ಎಂದು ತಾಲೂಕು ಪಂಚಾಯತ್‌ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಉಸ್ಮಾನ್‌ ಕರೋಪಾಡಿ ಆಡಳಿತ ವ್ಯವಸ್ಥೆಯ ವಿರುದ್ಧ ಆರೋಪಿಸಿದರು.

Advertisement

ಅವರು ಡಿ. 14ರಂದು ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಿದರು. ಶೌಚಾಲಯ ನೀಡಲು ಸಮಸ್ಯೆ ಏನು, ಯಾಕೆ ಆಗಿಲ್ಲ ಎಂದಾಗ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತವಾಯಿತು.

ಅಕ್ಷರ ದಾಸೋಹ ಸೌಲಭ್ಯ ವಂಚಿತ
ತಾಲೂಕಿನಲ್ಲಿ ಎರಡು ಶಾಲೆಗಳಲ್ಲಿ ಅಕ್ಷರ ದಾಸೋಹದ ಸೌಲಭ್ಯ ವಂಚಿತವಾಗಿದೆ. ಕಲ್ಲಡ್ಕ ಶ್ರೀರಾಮ ಶಿಕ್ಷಣ ಸಂಸ್ಥೆ ಮತ್ತು ಪುಣಚ ಶ್ರೀದೇವಿ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಬೇಡಿಕೆ ಬಂದಿಲ್ಲ, ಬಂದಲ್ಲಿ ಒದಗಿಸಲು ಸಿದ್ಧರಿದ್ದೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಪೂರಕ ಪ್ರಶ್ನೆಗೆ ಉತ್ತರಿಸಿ ತಿಳಿಸಿದರು.

ವಿಷಯ ಪ್ರಸ್ತಾವಿಸಿದ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಈ ವಿಷಯದ ಕುರಿತು ಸ್ಪಷ್ಟನೆ ಬಯಸಿದಾಗ ಉತ್ತರಿಸಿದ ಅಧಿಕಾರಿ, ಎರಡೂ ಶಿಕ್ಷಣ ಸಂಸ್ಥೆಗಳು ಅಕ್ಷರ ದಾಸೋಹದಡಿ ಸೌಲಭ್ಯ ಪಡೆಯಲು ಅರ್ಹ. ಆದರೆ ಅಲ್ಲಿಂದ ಬೇಡಿಕೆ ಬಂದಿಲ್ಲ. ಬೇಡಿಕೆ ಬಂದರೆ ಪೂರೈಸಲು ಅಡ್ಡಿಯಿಲ್ಲ ಎಂದರು.

ರೇಶನ್‌ ಕಾರ್ಡ್‌: ಹೆಸರು ರದ್ದು ಮಾಡಿಲ್ಲ
ರೇಶನ್‌ ಕಾರ್ಡ್‌ನಲ್ಲಿ ಇರುವ ಹೆಸರಿನ ವಿಳಾಸದಲ್ಲಿ ವ್ಯಕ್ತಿ ಇಲ್ಲದಿದ್ದರೆ ಅವರ ಹೆಸರನ್ನು ಯಾಕೆ ರದ್ದುಪಡಿಸುವುದಿಲ್ಲ ಎಂಬ ಪ್ರಶ್ನೆ ಸಭೆಯಲ್ಲಿ ಪ್ರಸ್ತಾವವಾಯಿತು. ಇದಕ್ಕೆ ಉತ್ತರಿಸಿದ ಅಧಿಕಾರಿ, ಕಳೆದ ಆರು ತಿಂಗಳಿಂದ ಕಂಪ್ಯೂಟರ್‌ ಸಮಸ್ಯೆ ಇದೆ. ಯಾರೂ ಯಾವ ಅಂಗಡಿಯಿಂದಲೂ ರೇಶನ್‌ ಪಡೆಯಬಹುದು. ಅದಕ್ಕೆ ಸೂಕ್ತ ಮಾರ್ಗದರ್ಶಿ ಸೂಚನೆ ನೀಡಿದೆ ಎಂದು ಅಧಿಕಾರಿ ತಿಳಿಸಿದರು. ಜಿ.ಪಂ. ಸದಸ್ಯೆ ಮಮತಾ ಡಿ.ಎಸ್‌. ಗಟ್ಟಿ ಒಟ್ಟು ಎಷ್ಟು ರೇಶನ್‌ ಕಾರ್ಡ್‌ ವಿತರಣೆಯಾಗಿವೆ ಎಂದು ಗ್ರಾ.ಪಂ.ಗೆ ಮಾಹಿತಿ ದೊರಕುತ್ತಿಲ್ಲ ಅದರ ಪರಿಹಾರದ ಕುರಿತು ಸೊಸೈಟಿ ಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

Advertisement

ಉತ್ತರವೇ ಸಿಗುತ್ತಿಲ್ಲ
ಕಂದಾಯ ಇಲಾಖೆಯಿಂದ ಅಧಿಕಾರಿಗಳು ಬರುವುದೇ ಇಲ್ಲ. ನಮಗೆ ಸಮರ್ಪಕ ಉತ್ತರ ದೊರಕುವುದೇ ಇಲ್ಲ ಎಂದು ಸದಸ್ಯರು ಆಕ್ಷೇಪಿಸಿದ ಘಟನೆ ನಡೆಯಿತು. ಸಜಿಪಮೂಡ ಅಂಗನವಾಡಿ ಕುರಿತು ಸದಸ್ಯ ಕೆ. ಸಂಜೀವ ಪೂಜಾರಿ ಪ್ರಶ್ನಿಸಿದಾಗ ಸಮರ್ಪಕ ಉತ್ತರ ವ್ಯಕ್ತವಾಗಲಿಲ್ಲ.

ಮಿನಿ ವಿಧಾನಸೌಧ ಅವ್ಯವಸ್ಥೆ
ಮಿನಿ ವಿಧಾನಸೌಧ ಉದ್ಘಾಟನೆಗೊಂಡು ತಿಂಗಳು ಕಳೆಯಿತು. ಆದರೆ ತಹಶೀಲ್ದಾರ್‌ ಚೇಂಬರ್‌ ಎಲ್ಲಿದೆ ಎಂದು ಗೊತ್ತಾಗುತ್ತಿಲ್ಲ. ಅಲ್ಲೊಂದು ಗುರುತಿನ ಬೋರ್ಡ್‌ ಹಾಕಲೇನು ಅಡ್ಡಿ ಎಂದು ಸದಸ್ಯ ಪ್ರಭಾಕರ ಪ್ರಭು ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಉಮೇಶ್‌ ಭಟ್‌, ಇದು ಪಿಡಬ್ಲ್ಯುಡಿ ಇಲಾಖೆಯ ಕಾರ್ಯಪಟ್ಟಿಯಲ್ಲಿಲ್ಲ ಎಂದರು.

ಶಿಕ್ಷಕರ ಕೊರತೆ
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಸರಕಾರಿ ಪ್ರೌಢಶಾಲೆಗಳಲ್ಲಿ ಉತ್ತಮ ಫ‌ಲಿತಾಂಶ ಬರಲು ಸಾಧ್ಯ ಎಂದು ಹೈದರ್‌ ಕೈರಂಗಳ, ಸುಭಾಶ್ಚಂದ್ರ, ಯಶವಂತ ಪೊಳಲಿ ತಿಳಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ಕೊಟ್ಟರೂ ಪಾಲಿಸುವುದಿಲ್ಲ ಯಾಕೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ ಮಮತಾ ಗಟ್ಟಿ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ತಾಲೂಕು ಪಂಚಾಯತ್‌ ಉಪಾಧ್ಯಕ್ಷ ಅಬ್ಟಾಸ್‌ ಅಲಿ ಮಾತನಾಡಿ, ವಿವಿಧ ಚುನಾವಣೆಗೆ ಸಂಬಂಧಿಸಿ ಮತದಾರರ ಪಟ್ಟಿಯಲ್ಲಿ ಇರುವಂತಹ ಹೆಸರನ್ನು ತೆಗೆಯುವ ಕೆಲಸ ಆಗಬಾರದು, ಇದರಿಂದ ಕೆಟ್ಟ ಸಂದೇಶ ಮತದಾರರಿಗೆ ಹೋಗುತ್ತದೆ. ಇದನ್ನು ಚುನಾವಣೆ ಇಲಾಖೆ ಗಮನಿಸಬೇಕು ಎಂದು ಕರೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಜಿಲ್ಲಾ ಪಂಚಾಯತ್‌ ಸದಸ್ಯರಾದ ರವೀಂದ್ರ ಕಂಬಳಿ, ಮಹಾಬಲ ಆಳ್ವ, ವಿವಿಧ ವಿಷಯಗಳ ಬಗ್ಗೆ ಗಮನ ಸೆಳೆದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್‌ ಮಿರಾಂಡ ಸ್ವಾಗತಿಸಿ, ವಂದಿಸಿದರು.

ಹಕ್ಕುಪತ್ರ ತಾರತಮ್ಯ
ಸಿಎಂ ಕಾರ್ಯಕ್ರಮದಲ್ಲಿ ಪಿಲಾತಬೆಟ್ಟು ಗ್ರಾಮಸ್ಥರಲ್ಲಿ ಕೆಲವರಿಗೆ ಮಾತ್ರ ಹಕ್ಕುಪತ್ರ ನೀಡುವ ತಾರತಮ್ಯ ಮಾಡಲಾಗಿದೆ. ಇದರಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ ಎಂದು ರಮೇಶ್‌ ಕುಡ್ಮೇರು ಆಪಾದಿಸಿದರು. ಈ ಸಂದರ್ಭ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಾಳ್ತಿಲದಲ್ಲೂ ಹಕ್ಕುಪತ್ರ ವಿತರಣೆ ಕುರಿತು ತಾ.ಪಂ .ಸದಸ್ಯರಿಗೆ ಮಾಹಿತಿ ನೀಡಿಲ್ಲ ಎಂದು ಸದಸ್ಯೆ ಲಕ್ಷ್ಮೀಗೋಪಾಲಾಚಾರ್ಯ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next