Advertisement

ಕಬ್ಬನ್‌ಪಾರ್ಕ್‌ನಲ್ಲಿ ಶುದ್ಧ ನೀರಿನ ಘಟಕ

12:42 PM Jun 06, 2017 | Team Udayavani |

ಬೆಂಗಳೂರು: ಕಬ್ಬನ್‌ ಪಾರ್ಕಲ್ಲಿ ಇನ್ನುಮುಂದೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆ ಉದ್ಯಾನವನದಲ್ಲಿ ಎರಡು ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ಮಾಡಲಿದ್ದು, ಎರಡು ದಿನಗಳಲ್ಲಿ ಈ ಸಂಬಂಧ ಕಾಮಗಾರಿ ಆರಂಭಗೊಳ್ಳಲಿದೆ.

Advertisement

ಉದ್ಯಾನದ ಚಾಮರಾಜೇಂದ್ರ ಒಡೆಯರ್‌ ಪ್ರತಿಮೆ ಬಳಿ ಒಂದು ಘಟಕ ಹಾಗೂ ಕೇಂದ್ರ ಗ್ರಂಥಾಲಯದ ಸಮೀಪದಲ್ಲಿ ಮತ್ತೂಂದು ಘಟಕ ನಿರ್ಮಾಣವಾಗಲಿದೆ. ಪ್ರತಿಯೊಂದು ಘಟಕದ ಸುತ್ತಳತೆ 400 ಚದರ ಅಡಿ ಇರಲಿದೆ. 2.1 ಮೀಟರ್‌ ಎತ್ತರ, 1.5 ಮೀಟರ್‌ ಸ್ಲೋಪಿಂಗ್‌ ರೂಫ್ ಇರಲಿದೆ. ಘಟಕದ ಮೂರು ಬದಿಗಳಲ್ಲಿ ನೀರಿನನಲ್ಲಿ ಹಾಗೂ ಮತ್ತೂಂದು ಬದಿಯಲ್ಲಿ ಬಾಗಿಲು ನಿರ್ಮಿಸಲು ಉದ್ದೇಶಿಸಲಾಗಿದೆ.

ಈ ಘಟಕಗಳಿಗೆ ಆರ್‌ಒ ಫಿಲ್ಟರ್‌ (ರಿವರ್ಸ್‌ ಒಸ್ಮೋಸಿಸ್‌ ಫಿಲ್ಟರ್‌) ಅಳವಡಿಸಲಾಗುತ್ತಿದ್ದು, ಇದರಲ್ಲಿ 250 ಎಲ್‌ಪಿಎಚ್‌ (ಲೀಟರ್‌ ಪರ್‌ ಹವರ್‌) ಸಾಮರ್ಥ್ಯದಲ್ಲಿ ನೀರು ಶುದ್ಧೀಕರಣಗೊಳ್ಳಲಿದೆ. ಘಟಕದಲ್ಲಿ ನಿರ್ಮಿಸಲಾದ ಟ್ಯಾಂಕ್‌ನಲ್ಲಿ ಕಾವೇರಿ ನೀರನ್ನು ಸಂಗ್ರಹಿಸುವಂತೆ ಮಾಡಲಾಗುತ್ತದೆ.

ಸಂಗ್ರಹವಾದ ನೀರು 250 ಲೀ/ಪ್ರತಿ ಗಂಟೆಗೆ ಶುದ್ಧೀಕರಣಗೊಳ್ಳುವಂತೆ ಟ್ಯಾಂಕಿನಿಂದ ಫಿಲ್ಟರ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಶುದ್ಧೀಕರಣಗೊಂಡ ನೀರು ಘಟಕದಲ್ಲಿ ಸಂಗ್ರಹವಾಗಲಿದೆ. ನೀರು ಖಾಲಿಯಾಗುತ್ತಿದ್ದಂತೆ ಕೂಡಲೇ ಯಂತ್ರಗಳು ಸ್ವಯಂ ಚಾಲನೆಗೊಂಡು ಶುದ್ಧೀಕರಣ ಕೆಲಸವನ್ನು ಪುನರಾರಂಭಿಸುವ ವ್ಯವಸ್ಥೆ ಈ ಆರ್‌ಒ ಫಿಲ್ಟರ್‌ ಯಂತ್ರದಲ್ಲಿ ಇರಲಿದೆ. 

ಪಿಡಬ್ಲೂಡಿಗೆ ಜವಾಬ್ದಾರಿ: ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದು, ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಜಲಮಂಡಳಿಯ ಗುತ್ತಿಗೆದಾರ ಪಾಪೇಗೌಡ ಎಂಬುವರು ಗುತ್ತಿಗೆ ಪಡೆದಿದ್ದಾರೆ. ಪ್ರತಿ ಘಟಕ ನಿರ್ಮಾಣಕ್ಕೆ ತಲಾ 4.99 ಲಕ್ಷದಂತೆ ಒಟ್ಟು 9.98 ಲಕ್ಷ ರೂ. ಖರ್ಚಾಗಲಿದ್ದು, ಉಳಿದಂತೆ ಇತರ ಪರಿಕರಗಳ ಪೂರೈಕೆ ಸೇರಿ ಅಂದಾಜು 15 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

Advertisement

ಇನ್ನೆರಡು ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದ್ದು, ಎರಡು ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೈಕೋರ್ಟ್‌ ವಿಶೇಷ ಕಟ್ಟಡಗಳ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಪ್ರಸನ್ನಕುಮಾರ್‌ ಮಾಹಿತಿ ನೀಡಿದ್ದಾರೆ.

ನೀರಿಗೆ ಹೆಚ್ಚು ಬೇಡಿಕೆ:  ಪ್ರಸ್ತುತ ಕಬ್ಬನ್‌ ಉದ್ಯಾನದ ಯುಬಿ ಸಿಟಿ ರಸ್ತೆ, ಬ್ಯಾಂಡ್‌ ಸ್ಟಾಂಡ್‌ ಸಮೀಪ ಹಾಗೂ ಕೇಂದ್ರ ಗ್ರಂಥಾಲಯದ ಬಳಿ ಹೀಗೆ ಮೂರು ಕಡೆ ನೀರಿನ ಘಟಕಗಳು ಇವೆ. ಹೈಕೋರ್ಟ್‌, ಪ್ರಸ್‌ಕ್ಲಬ್‌, ವಿವಿಧ ಸರ್ಕಾರಿ ಕಚೇರಿಗಳ ನೌಕರರು, ಪ್ರವಾಸಿಗರು, ವಾಹನ ಸವಾರರು, ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುವ ವಾಕರ್ ಸೇರಿದಂತೆ ಪ್ರತಿ ದಿನ ಉದ್ಯಾನಕ್ಕೆ ಸುಮಾರು 15ರಿಂದ 25 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ.

ಭಾನುವಾರ ಮತ್ತು ಶನಿವಾರ ವಾಹನಗಳ ಪ್ರವೇಶಕ್ಕೆ ನಿಷೇಧ ಇರುವ ಹಿನ್ನೆಲೆಯಲ್ಲಿ ವಿವಿಧ ಮ್ಯಾರಾಥಾನ್‌ಗಳು ಕಬ್ಬನ್‌ಪಾರ್ಕ್‌ನಲ್ಲಿ ನಡೆಯುತ್ತಿರುತ್ತವೆ. ಎಲ್ಲರಿಗೂ ಕುಡಿಯಲು ನೀರು ಬೇಕು. ಆದರೆ, ಬಹುತೇಕ ಮಂದಿ ಕಾವೇರಿ ನೀರನ್ನು ನೇರವಾಗಿ ಕುಡಿಯಲು ಸ್ವಲ್ಪ ಹಿಂಜರಿಯುತ್ತಾರೆ.

ದೇಶ, ವಿದೇಶಗಳಿಂದ ಬರುವ ಪ್ರವಾಸಿಗರು ಶುದ್ಧ ಕುಡಿಯುವ ನೀರು ಬೇಕೆಂದು ಬಾಟಲ್‌ಗ‌ಳಲ್ಲಿ ನೀರು ತರುವುದಲ್ಲದೇ ಅಲ್ಲಿಯೇ ಬಿಸಾಡಿ ಹೋಗುವವರ ಸಂಖ್ಯೆ ಹೆಚ್ಚು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಶುದ್ಧ ನೀರಿನ ಘಟಕಗಳು ಸ್ಥಾಪನೆ ಹೆಚ್ಚು ಸಹಾಯಕವಾಗಲಿದೆ ಎನ್ನುತ್ತಾರೆ ಕಬ್ಬನ್‌ಪಾರ್ಕ್‌ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ್‌ ಮುರುಗೋಡು.

ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಕಬ್ಬನ್‌ಪಾರ್ಕ್‌ನಲ್ಲಿ ದಿನದ 24 ಗಂಟೆಯೂ ಕಾವೇರಿ ನೀರು ಬರುವ ಲೈನ್‌ಗೂ ಹಾಗೂ ಫಿಲ್ಟರ್‌ಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಘಟಕವು 500 ಲೀ. ಸಂಗ್ರಹ ಸಾಮರ್ಥ್ಯ ಇರಲಿದ್ದು, ನೀರು ಖಾಲಿಯಾಗುತ್ತಿದ್ದಂತೆ ಪುನಃ ತುಂಬಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು.
-ಪ್ರಸನ್ನ ಕುಮಾರ್‌, ಸಹಾಯಕ ಎಂಜಿನಿಯರ್‌, ಪಿಡಬ್ಲೂಡಿ

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next