Advertisement
ಕೇಂದ್ರ ಸರಕಾರದ ಬಹುಮಾನ್ಯ ಯೋಜನೆಗಳು ನಾಲ್ಕು ವರುಷಗಳ ಅವಧಿಯಲ್ಲಿ ದೇಶವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಔದ್ಯೋಗಿಕ ಕ್ಷೇತ್ರಗಳಲ್ಲಿ ಪ್ರಗತಿಯ ಹೊಸದಿಗಂತದತ್ತ ಮುನ್ನಡೆಸುತ್ತಿವೆ. ಸ್ವಾತಂತ್ರ್ಯ ಪಡೆದು 70 ವರ್ಷ ಸಂದಿದ್ದರೂ ದೇಶದ ಪ್ರಗತಿಗೆ ಅನೇಕ ವಿಘ್ನಗಳು ಅಡ್ಡಿಯಾಗುತ್ತಲೇ ಇದ್ದವು. ರಾಜಕಾರಣಿಗಳಿಂದ ಮಾತ್ರ ಆಡಳಿತ ಪಕ್ಷಗಳತ್ತ ಅಪಸ್ವರ ಕೇಳಿಸುತ್ತಿತ್ತು ಎನ್ನಲಾಗುತ್ತಿಲ್ಲ. ಜನಸಾಮಾನ್ಯರೂ ಬೇಸತ್ತು ಟೀಕಿಸುತ್ತಿದ್ದರು. ಇದನ್ನು ಗಮನದಲ್ಲಿರಿಸಿ ಮೋದಿಯವರು ತಳಸ್ತರದ ನೋವು, ಸಂಕಷ್ಟಗಳನ್ನು ಪರಿಹರಿಸಲು ಪಣ ತೊಟ್ಟಿದ್ದಾರೆ. ಯಶಸ್ವಿ ಜೀವನ ನಿರ್ವಹಣೆಗಾಗಿ ಅವರ ಕನಸಿನ ಯೋಚನೆ – ಯೋಜನೆಗಳೀಗ ಫಲಪ್ರದವಾಗುತ್ತಿವೆ.
Related Articles
Advertisement
ಗಮನಕ್ಕೆ ಬರುತ್ತಿರುವ ಸಂಗತಿಯೆಂದರೆ ಹಿಂದಿನ ಸಮಯಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯತು, ನಗರಸಭೆ, ಪಟ್ಟಣ ಪಂಚಾಯತು, ಮಹಾನಗರಪಾಲಿಕೆಗಳಲ್ಲಿ ಶುಚಿತ್ವದ ನಿರ್ವಹಣೆಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎನ್ನುವುದು. ಸರಕಾರಿ ಕಚೇರಿ, ಖಾಸಗಿ ಕಚೇರಿ, ವಾಣಿಜ್ಯ ಸಂಕೀರ್ಣಗಳಲ್ಲಿ ನೈರ್ಮಲ್ಯವನ್ನು ಕಾಣಬಹುದು. ಸಭೆ – ಸಮಾರಂಭ , ಉತ್ಸವ – ಜಾತ್ರೆ ಮುಂತಾದೆಡೆಗಳಲ್ಲಿ “ಅಲ್ಲಿ ಕಸ ಹಾಕಬೇಡಿ… ಪ್ಲಾಸ್ಟಿಕ್ ಬಳಸದಿರಿ…’ ಎಂದು ಶುಚಿತ್ವ ಕಾಪಾಡುವಂತೆ ಬಿನ್ನವಿಸಿಕೊಳ್ಳುತ್ತಾರೆ. ಈ ವರ್ಷ ಶ್ರವಣ ಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಕಸವಿರದಂತೆ ಬಹಳ ಎಚ್ಚರಿಕೆ ಕಾಯ್ದುಕೊಳ್ಳಲಾಯಿತು. ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಸಾವಿರಕ್ಕೂ ಮೇಲ್ಪಟ್ಟು ಸ್ವಯಂ ಸೇವಕರಿದ್ದರು. ಜಿಲ್ಲಾಡಳಿತವೂ ತ್ಯಾಜ್ಯ ವಿಲೇವಾರಿಗಾಗಿ ವಿಶೇಷ ಗಮನಹರಿಸಿತ್ತು. ಸ್ವಚ್ಛತೆ ಕುರಿತು ಅರಿವು ಮೂಡಿಸುವ ಜಾಗೃತಿ ಜಾಥಾ ಕೂಡಾ ಶ್ರವಣಬೆಳಗೊಳ ಮತ್ತು ಸುತ್ತಮುತ್ತ ಶುಚಿತ್ವ ಕಾಪಾಡಲು ಪ್ರಾಮಾಣಿಕ ಶ್ರಮ ವಹಿಸಿತ್ತು. ಧರ್ಮಸ್ಥಳ, ಕೊಲ್ಲೂರು , ಕಟೀಲು , ಕುಕ್ಕೆ, ಉಡುಪಿ ಮತ್ತಿತರ ಪುಣ್ಯ ಕ್ಷೇತ್ರಗಳಲ್ಲಿ ಶುಚಿತ್ವಕ್ಕೆ ವಿಶೇಷ ಮುತುವರ್ಜಿ ವಹಿಲಾಗುತ್ತಿದೆ.
ಮಹಾತ್ಮಾ ಗಾಂಧೀಜಿಯವರು ಅಹಿಂಸಾ ಪಥದಲ್ಲಿ ದೇಶದ ಎಲ್ಲ ಪ್ರದೇಶಗಳಲ್ಲಿ ಸ್ವಾತಂತ್ರ್ಯ ಚಳುವಳಿಯ ಸಂದೇಶ ಸಾರಿ, ಸ್ವಾತಂತ್ರ್ಯಕ್ಕಾಗಿ ಸ್ವದೇಶಾಭಿಮಾನ ಬೆಳೆಸಿದರು. ಅವರ ಸರಳ ಜೀವನದಲ್ಲಿ ಸ್ವಚ್ಛತೆಯ ಸಂದೇಶವೂ ಇತ್ತು. ಪ್ರಕೃತಿ ಮಲಿನಗೊಳ್ಳದಿರಲು ನಿಸರ್ಗವನ್ನು ಸಂರಕ್ಷಿಸಲೂ ಕರೆ ನೀಡಿದ್ದರು. ತಾಯಿನಾಡಿನ ಸ್ವತ್ಛತೆಗೆ ಗಾಂಧೀಜಿ ನಾಂದಿಯಾದವರು. ಈಗ ದೇಶದ ಅಭಿವೃದ್ಧಿ ಒಂದೆಡೆ ಭರದಲ್ಲಿ ಮುಂದುವರಿದರೂ ತ್ಯಾಜ್ಯ, ಮಾಲಿನ್ಯ ಮಾತೃಭೂಮಿಯ ನೈರ್ಮಲ್ಯತೆಯನ್ನು ಪರಿಶುದ್ಧತೆಯನ್ನು ಕಳೆದುಕೊಳ್ಳುತ್ತಿರುವುದನ್ನು ಅವಲೋಕಿಸಿದ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ವರ್ಗದ ಎಲ್ಲ ಸಂಘಟನೆಗಳ ಮುಂದಾಳುಗಳನ್ನು ಭೇಟಿ ನೀಡಿ, ಸಂಪರ್ಕಿಸಿ “ಸ್ವಚ್ಛತಾ ಹೀ ಸೇವಾ’ ಎಂಬ ಘೋಷಾವಾಕ್ಯ ಪ್ರಚುರಪಡಿಸಿದ್ದಾರೆ. ಒಮ್ಮೆ ಮನವರಿಕೆಯಾದರೆ ಮುಂದೆಯೂ ಸ್ವಚ್ಛತೆಗಾಗಿ ಆದ್ಯತೆ ಕಲ್ಪಿಸಲಾಗುತ್ತದೆ ಎಂಬುದು ಅವರ ಮಾತಿನ ಮರ್ಮ.
“ನನ್ನ ದೇಶ, ನನ್ನೂರು ಸ್ವತ್ಛ’ ಎಂಬ ಧ್ಯೇಯದೊಂದಿಗೆ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿ ಸಮುದಾಯ ಸ್ವಯಂ ಸೇವಾ ಸಂಘದ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಹಿರಿಯ -ಕಿರಿಯರು ಜತೆಜತೆಯಾಗಿ ತ್ಯಾಜ್ಯ ಇರದಂತೆ ಎಚ್ಚರ ವಹಿಸುವುದು ಅದೇ ಅಗತ್ಯವಾಗಿದೆ. ಮಾರಕ ರೋಗಗಳು ತ್ಯಾಜ್ಯಗಳಿಂದಲೇ ಉಂಟಾಗುವುದೆಂಬುದರ ಅರಿವು ಮೂಡಿಸಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ವರ್ಜಿಸಬೇಕು. ರಾಸಾಯನಿಕ ಕ್ರಿಮಿಕೀಟನಾಶಕ ಬಳಕೆ – ರಸಗೊಬ್ಬರ ಬಳಕೆ ಕಡಿಮೆ ಮಾಡಿಕೊಳ್ಳಬೇಕು. ನದಿ ನೀರು ಕಲುಷಿತ ಆಗದಂತೆ ಜಾಗೃತಿ ಇದ್ದಿರಬೇಕು.
ಎಲ್ಲೆಡೆ ಶೌಚಾಲಯ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಘಟಕ, ತ್ಯಾಜ್ಯ ಪುನರ್‌ಬಳಕೆ ಘಟಕ, ಒಳಚರಂಡಿ ವ್ಯವಸ್ಥೆ ಅನುಷ್ಠಾನ ಆಗುವಂತೆ ನಾಗರಿಕರು, ಸರಕಾರದೊಂದಿಗೆ ಕೈ ಜೋಡಿಸಬೇಕಾಗಿದೆ. ಪ್ರಕೃತಿಯ ನೈಜ ಫಲವತ್ತತೆಯನ್ನು ಮಲಿನಗೊಳಿಸುವುದು ಅಪರಾಧವಲ್ಲವೇ? ಮಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ 60 ವಾರಗಳಿಗೂ ಮಿಕ್ಕಿ ಆಯೋಜಿಸಿದ “ಸ್ವತ್ಛತಾ ಅಭಿಯಾನ’ ಮಹತ್ಕಾರ್ಯವನ್ನು ಮಾಡಿರುವುದು ದಾಖಲಾರ್ಹವಾದುದು. ಅನೇಕ ಹಳ್ಳಿಗಳಲ್ಲಿ, ಸ್ವತ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವುದು ಸ್ವಾಗತಾರ್ಹವಾದುದು. “ಸ್ವಚ್ಛತಾ ಹೀ ಸೇವಾ ‘ ಅಭಿಯಾನದಲ್ಲಿ ಸರ್ವರೂ ಪಾಲ್ಗೊಂಡು ತ್ಯಾಜ್ಯ ಮುಕ್ತ- ಮಾಲಿನ್ಯ ಮುಕ್ತ ಆರೋಗ್ಯದಾಯಕ ನಿರ್ಮಲ ಪರಿಸರ ಸಂರಕ್ಷಣೆಗೆ ಬಾಪೂ ಪ್ರೇರಣೆ ಫಲಿಸಲಿ.
ಡಾ| ಎಸ್.ಎನ್. ಅಮೃತ ಮಲ್ಲ